पवित्र बाइबिल
ಹಳೆಯ ಒಡಂಬಡಿಕೆ
ಯೆರೆಮೀಯ
37ನೇ ಅಧ್ಯಾಯ
- Verse 1: ಯೋಷೀಯನ ಮಗ ಚಿದ್ಕೀಯನು ಯೆಹೋಯಾಕೀಮನ ಮಗ ಕೊನ್ಯನಿಗೆ ಬದಲಾಗಿ ರಾಜ್ಯವಾಳುತ್ತಿದ್ದನು. ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಅವನನ್ನು ಜುದೇಯದ ನಾಡಿಗೆ ಅರಸನನ್ನಾಗಿಸಿದ್ದನು.
- Verse 2: ಆದರೆ ಚಿದ್ಕೀಯನಾಗಲಿ, ಅವನ ಸೇವಕರಾಗಲಿ, ನಾಡಿನ ಜನರಾಗಲಿ ಸರ್ವೇಶ್ವರನು ಪ್ರವಾದಿ ಯೆರೆಮೀಯನಿಂದ ನುಡಿಸಿದ ಮಾತುಗಳನ್ನು ಕೇಳದೆಹೋದರು.
- Verse 3: ಹೀಗಿರುವಲ್ಲಿ ಅರಸ ಚಿದ್ಕೀಯನು ಶೆಲೆಮ್ಯನ ಮಗ ಯೆಹೂಕಲನನ್ನು ಮತ್ತು ಯಾಜಕ ಮಾಸೇಯನ ಮಗ ಚೆಫನ್ಯನನ್ನು ಯೆರೆಮೀಯನ ಬಳಿಗೆ ಕಳಿಸಿ, “ನಮಗಾಗಿ ನಮ್ಮ ದೇವರಾದ ಸರ್ವೇಶ್ವರನನ್ನು ಪ್ರಾರ್ಥಿಸು” ಎಂದು ವಿನಂತಿಸಿದನು.
- Verse 4: ಆಗ ಯೆರೆಮೀಯನು ಇನ್ನೂ ಸೆರೆಯಾಗಿರಲಿಲ್ಲ. ಜನರಲ್ಲಿಗೆ ಹೋಗುತ್ತಾ ಬರುತ್ತಿದ್ದನು.
- Verse 5: ಅಷ್ಟರಲ್ಲಿ ಫರೋಹನ ಸೈನ್ಯವು ಈಜಿಪ್ಟಿನಿಂದ ಹೊರಟಿತ್ತು. ಈ ಸಂಗತಿಯನ್ನು ಕೇಳಿ, ಜೆರುಸಲೇಮನ್ನು ಈಗಾಗಲೆ ಮುತ್ತಿದ್ದ ಬಾಬಿಲೋನಿಯದ ಸೈನಿಕರು ಅದನ್ನು ಬಿಟ್ಟುಹೋಗಿದ್ದರು.
- Verse 6: ಈ ಸಂದರ್ಭದಲ್ಲಿ ಪ್ರವಾದಿ ಯೆರೆಮೀಯನಿಗೆ ಸರ್ವೇಶ್ವರನಿಂದ ಕೇಳಿ ಬಂದ ವಾಣಿ:
- Verse 7: “ಇಸ್ರಯೇಲರ ದೇವರಾದ ಸರ್ವೇಶ್ವರ ಹೀಗೆ ಎನ್ನುತ್ತಾರೆ - ನನ್ನ ಅಭಿಪ್ರಾಯವನ್ನು ವಿಚಾರಿಸಲು ನಿಮ್ಮನ್ನು ನನ್ನ ಬಳಿಗೆ ಕಳಿಸಿದ ಜುದೇಯದ ಅರಸನಿಗೆ ಹೀಗೆಂದು ಹೇಳಿರಿ: ‘ಇಗೋ, ನಿಮ್ಮ ಸಹಾಯಕ್ಕೆ ಹೊರಟಿರುವ ಫರೋಹನ ಸೈನ್ಯವು ಸ್ವದೇಶಕ್ಕೆ ಹಿಂದಿರುಗುವುದು.
- Verse 8: ಬಾಬಿಲೋನಿಯದವರು ಪುನಃ ಬಂದು ಈ ನಗರದ ಮೇಲೆ ದಾಳಿ ನಡೆಸುವರು. ಇದನ್ನು ಆಕ್ರಮಿಸಿ ಬೆಂಕಿಯಿಂದ ಸುಟ್ಟುಹಾಕುವರು.’
- Verse 9: ಸರ್ವೇಶ್ವರ ಇಂತೆನ್ನುತ್ತಾರೆ:- ಬಾಬಿಲೋನಿಯರು ನಿಮ್ಮಿಂದ ಖಂಡಿತವಾಗಿ ತೊಲಗಿಹೋಗುವರು ಎಂದುಕೊಂಡು ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿ. ಅವರು ಹೋಗುವುದಿಲ್ಲ.
- Verse 10: ದಾಳಿಮಾಡುವ ಆ ಬಾಬಿಲೋನಿಯರನ್ನು ನೀವು ಪೂರ್ತಿಯಾಗಿ ಸೋಲಿಸಿದರೂ, ಅವರಲ್ಲಿ ಗಾಯಗೊಂಡವರು ಮಾತ್ರ ನಿಮ್ಮಲ್ಲಿ ಉಳಿದರೂ, ಆ ಗಾಯಗೊಂಡವರೇ ತಮ್ಮ ತಮ್ಮ ಗುಡಾರಗಳಿಂದ ಎದ್ದುಬಂದು ಈ ನಗರವನ್ನು ಬೆಂಕಿಯಿಂದ ಸುಟ್ಟುಬಿಡುವರು.
- Verse 11: ಬಾಬಿಲೋನಿಯದ ಸೈನ್ಯವು ಫರೋಹನ ಸೈನ್ಯಕ್ಕೆ ಭಯಪಟ್ಟು ಜೆರುಸಲೇಮನ್ನು ಬಿಟ್ಟುಹೋಯಿತು.
- Verse 12: ಆಗ ಯೆರೆಮೀಯನು ಬೆನ್ಯಾಮೀನ್ ನಾಡಿನಲ್ಲಿ ತನಗೆ ಬರಬೇಕಾಗಿದ್ದ ಸೊತ್ತನ್ನು ಜನರ ಸಮಕ್ಷಮದಲ್ಲಿ ತೆಗೆದುಕೊಳ್ಳಲು ಜೆರುಸಲೇಮಿನಿಂದ ಅಲ್ಲಿಗೆ ಹೊರಟನು.
- Verse 13: ಬೆನ್ಯಾಮೀನನ ಬಾಗಿಲನ್ನು ಹಾದುಹೋಗುತ್ತಿರುವಾಗ ಶೆಲೆಮ್ಯನ ಮಗನೂ ಹನನ್ಯನ ಮೊಮ್ಮಗನೂ ಆದ ಇರೀಯನು ಅಲ್ಲಿ ಪಹರೆ ಕುಳಿತಿದ್ದನು. ಅವನು ಪ್ರವಾದಿ ಯೆರೆಮೀಯನನ್ನು, “ನೀನು ಬಾಬಿಲೋನಿಯರನ್ನು ಮರೆಹೋಗಲು ಹೋಗುತ್ತಿರುವೆ,” ಎಂದು ಹೇಳಿ ಅವನನ್ನು ಬಂಧಿಸಿದನು.
- Verse 14: ಅದಕ್ಕೆ ಯೆರೆಮೀಯನು, “ಅದು ಸುಳ್ಳು, ನಾನು ಬಾಬಿಲೋನಿಯರನ್ನು ಮರೆಹೋಗುವವನಲ್ಲ,” ಎಂದನು. ಇರೀಯನು ಅವನ ಮಾತನ್ನು ಕೇಳದೆ ಅವನನ್ನು ಬಂಧಿಸಿ, ಪದಾಧಿಕಾರಿಗಳ ಬಳಿಗೆ ಕರೆದುತಂದನು.
- Verse 15: ಆ ಅಧಿಕಾರಿಗಳು ಯೆರೆಮೀಯನ ಮೇಲೆ ಕೋಪಗೊಂಡು ಅವನನ್ನು ಹೊಡೆಯಿಸಿ, ತಾವು ಬಂದಿಖಾನೆಯನ್ನಾಗಿ ಮಾಡಿದ್ದ ಲೇಖಕ ಯೆಹೋನಾಥಾನನ ಮನೆಯಲ್ಲಿ ಸೆರೆಹಾಕಿಸಿದರು.
- Verse 16: ಯೆರೆಮೀಯನು ಆ ಬಂದಿಖಾನೆಯ ನೆಲಮನೆಗಳಲ್ಲಿ ಕೆಲವು ದಿವಸ ಇದ್ದನು.
- Verse 17: ಬಳಿಕ ಅರಸ ಚಿದ್ಕೀಯನು ಅವನನ್ನು ಕರೆಯಿಸಿ, “ದೇವರಿಂದ ಯಾವುದಾದರು ಸಂದೇಶ ದೊರೆಯಿತೊ?” ಎಂದು ಮನೆಯಲ್ಲಿ ಗುಟ್ಟಾಗಿ ವಿಚಾರಿಸಿದನು. ಯೆರೆಮೀಯನು, “ಹೌದು, ದೊರೆಯಿತು. ತಾವು ಬಾಬಿಲೋನಿನ ಅರಸನ ಕೈಗೆ ಸಿಕ್ಕಿಬೀಳುವಿರಿ,” ಎಂದನು.
- Verse 18: ಅಲ್ಲದೆ ಯೆರೆಮೀಯನು ಅರಸ ಚಿದ್ಕೀಯನಿಗೆ, “ನೀವು ನನ್ನನ್ನು ಸೆರೆಯಲ್ಲಿ ಹಾಕಿದ್ದಕ್ಕೆ ನಾನು ನಿಮಗಾಗಲಿ, ನಿಮ್ಮ ಸೇವಕರಿಗಾಗಲಿ, ಇಲ್ಲಿಯ ಜನರಿಗಾಗಲಿ ಮಾಡಿದ ಅಪರಾಧವೇನು?
- Verse 19: ‘ಬಾಬಿಲೋನಿನ ಅರಸನು ನಿಮಗೂ ಈ ನಾಡಿಗೂ ವಿರುದ್ಧವಾಗಿ ಆಕ್ರಮಣ ನಡೆಸನು’ ಎಂದು ಸಾರಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ?
- Verse 20: ಎನ್ನೊಡೆಯರೇ, ಅರಸರೇ, ದಯವಿಟ್ಟು ಆಲಿಸಿ: ಲೇಖಕ ಯೆಹೋನಾಥಾನನ ಮನೆಗೆ ನನ್ನನ್ನು ಮತ್ತೆ ಕಳಿಸಬೇಡಿ. ಕಳಿಸಿದರೆ ನಾನು ಅಲ್ಲೇ ಸತ್ತೇನು. ನನ್ನ ಈ ಬಿನ್ನಹವನ್ನು ಅಂಗೀಕರಿಸಿ,” ಎಂದು ಅರಿಕೆಮಾಡಿದನು.
- Verse 21: ಆಗ ಅರಸ ಚಿದ್ಕೀಯನು ಅಂತೆಯೆ ಅಪ್ಪಣೆಕೊಡಲು, ಯೆರೆಮೀಯನನ್ನು ರಾಜ್ಯದ ಕಾರಾಗೃಹದ ಅಂಗಳಕ್ಕೆ ಸ್ಥಳಾಂತರಿಸಲಾಯಿತು. ರೊಟ್ಟಿ ಮಾರುಕಟ್ಟೆಯಿಂದ ಪ್ರತಿದಿನ ಒಂದೊಂದು ರೊಟ್ಟಿಯನ್ನು ಅವನಿಗೆ ತಂದುಕೊಡುತ್ತಿದ್ದರು. ನಗರದ ರೊಟ್ಟಿಯೆಲ್ಲ ತೀರುವ ತನಕ ಹಾಗೆ ಮಾಡುತ್ತಿದ್ದರು. ಯೆರೆಮೀಯನು ರಾಜ್ಯದ ಕಾರಾಗೃಹದ ಅಂಗಳದಲ್ಲೇ ವಾಸಿಸುತ್ತಿದ್ದನು.