ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆರೆಮೀಯ
48ನೇ ಅಧ್ಯಾಯ
- Verse 1: ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಮೋವಾಬನ್ನು ಕುರಿತು ಹೀಗೆನ್ನುತ್ತಾರೆ: “ನೆಬೋ ಊರಿನ ಗತಿಯನ್ನು ಅಯ್ಯೋ, ಏನೆಂದು ಹೇಳಲಿ, ಅದು ಹಾಳಾಯಿತು. ಕಿರ್ಯತಯಿಮ್ ಮಾನಭಂಗ ಹೊಂದಿದೆ ಶತ್ರು ಕೈಗೆ ಸಿಕ್ಕಿ. ಮಿಸ್ಗಾಬ್ ಅವಮಾನಕ್ಕೆ ಗುರಿಯಾಗಿದೆ ನೆಲಸಮವಾಗಿ.
- Verse 2: ಮೋವಾಬಿನ ಕೀರ್ತಿ ಮಾಯವಾಯಿತು ಹೆಷ್ಬೋನ್ ಶತ್ರುಗಳ ಕೈವಶವಾಯಿತು. ‘ಮೋವಾಬ್ ಇನ್ನು ರಾಷ್ಟ್ರವೆನಿಸಿಕೊಳ್ಳದಷ್ಟು ಅದನ್ನು ಹಾಳುಮಾಡೋಣ ಬನ್ನಿ’ ಎಂದಿದ್ದಾರೆ ಆ ಶತ್ರುಗಳು. ಮದ್ಮೆನೇ, ನೀನೂ ಸುಮ್ಮನಾಗುವೆ, ಖಡ್ಗ ಬರುವುದು ನಿನ್ನನ್ನು ಬೆನ್ನಟ್ಟಿ.
- Verse 3: ‘ಅಯ್ಯೋ, ಸೂರೆಹೋದೆವು, ತೀವ್ರ ನಾಶವಾದೆವು!’ ಎಂಬ ಕೂಗಾಟ ಕೇಳಿಬರುತ್ತಿದೆ ಹೊರೊನಯಿಮಿನಿಂದ.
- Verse 4: “ಮೋವಾಬ್ ನಾಶವಾಯಿತು. ಅಲ್ಲಿ ದಿಕ್ಕೆಟ್ಟವರು ಮೊರೆಯಿಟ್ಟಿರುವರು.
- Verse 5: ಅಳುತ್ತಳುತ್ತಾ ಲೂಹೀತ್ ದಿಣ್ಣೆಯನ್ನು ಹತ್ತುತ್ತಿರುವರು ‘ನಾಶವಾದೆವಲ್ಲಾ!’ ಎಂಬ ಪ್ರಾಣಸಂಕಟದ ಪ್ರಲಾಪವು ಹೊರೊನಯಿಮ್ ಇಳಿಜಾರಿನಲ್ಲಿ ಕೇಳಿಸುತ್ತಿರುವುದು.
- Verse 6: ‘ಅಡವಿಯ ಕಾಡುಕತ್ತೆಯಂತೆ ಓಡಿಹೋಗಿ ಪ್ರಾಣ ಉಳಿಸಿಕೊಳ್ಳಿ’ ಎನ್ನುತ್ತಿರುವರು.
- Verse 7: “ಮೋವಾಬೇ, ನಿನ್ನ ಸಾಧನೆಗಳಲ್ಲೇ, ಧನರಾಶಿಗಳಲ್ಲೇ ಭರವಸೆಯಿಟ್ಟೆ. ಆದುದರಿಂದ ನೀನು ಇದೀಗಲೆ ಶತ್ರುಗಳ ಕೈವಶವಾಗುವೆ. ಕೆಮೋಷ್ ಎಂಬ ನಿನ್ನ ದೇವತೆಯೂ ಅದರ ಭಕ್ತ ಯಾಜಕರೂ ಹಾಗೂ ರಾಜ್ಯಾಧಿಕಾರಿಗಳು ಸೆರೆಗೆ ಹೋಗುವರು ಒಟ್ಟಿಗೆ.
- Verse 8: ಸೂರೆಗಾರನು ಪ್ರತಿಯೊಂದು ನಗರದ ಮೇಲೆ ಬೀಳುವನು. ಯಾವ ಪಟ್ಟಣವೂ ಉಳಿಯದು. ಸರ್ವೇಶ್ವರನ ನುಡಿಯಂತೆಯೆ ಮೇಲ್ನಾಡು ನಾಶವಾಗುವುದು, ಬೈಲ್ನಾಡು ಹಾಳಾಗುವುದು.
- Verse 9: ಮೋವಾಬಿಗೆ ರೆಕ್ಕೆ ಕಟ್ಟಿರಿ, ಅದು ಹಾರಿಹೋಗಲಿ ಅದರ ನಗರಗಳು ಹಾಳುಬಿದ್ದು ನಿರ್ಜನವಾಗುವುವು.
- Verse 10: ಸರ್ವೇಶ್ವರನು ನೇಮಿಸಿದ ಕೆಲಸವನ್ನು ನಿರ್ವಹಿಸುವುದರಲ್ಲಿ ಆಲಸ್ಯನಾಗಿರುವವನು ಶಾಪಗ್ರಸ್ತನು. ತನ್ನ ಕತ್ತಿ ರಕ್ತಸುರಿಸದಂತೆ ತಡೆಯುವವನಿಗೆ ಶಾಪ ತಗಲಲಿ!
- Verse 11: ಮೋವಾಬು ಚಿಕ್ಕತನದಿಂದಲೂ ನೆಮ್ಮದಿಯಾಗಿದೆ. ಅದು ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತಿದೆ. ಅದನ್ನು ಪಾತ್ರೆಯಿಂದ ಪಾತ್ರೆಗೆ ಯಾರೂ ಹೊಯ್ಯಲಿಲ್ಲ. ಅದು ಎಂದೂ ಸೆರೆಹೋಗಲಿಲ್ಲ. ಆದಕಾರಣ ಅದರ ರುಚಿ ಅದರಲ್ಲಿದೆ. ಅದರ ವಾಸನೆ ಮಾರ್ಪಡಲಿಲ್ಲ.
- Verse 12: ಹೀಗಿರಲು ಸರ್ವೇಶ್ವರ ಇಂತೆನ್ನುತ್ತಾರೆ: “ಇಗೋ, ದಿನಗಳು ಬರಲಿವೆ. ಆಗ ನಾನು ‘ಹೊಯ್ಯತಕ್ಕವರನ್ನು’ ಅವರ ಬಳಿಗೆ ಕಳುಹಿಸುವೆನು. ಅವರು ಅದನ್ನು ಹೊಯ್ದುಬಿಡುವರು. ಪಾತ್ರೆಗಳನ್ನು ಬರಿದುಮಾಡುವರು. ಗಡಿಗೆಗಳನ್ನು ಒಡೆದುಹಾಕುವರು.
- Verse 13: ಇಸ್ರಯೇಲ್ ವಂಶದವರು ನಂಬಿಕೆ ಇಟ್ಟಿದ್ದ ಬೇತೇಲ್ ಕ್ಷೇತ್ರವನ್ನು ಕುರಿತು ಆಶಾಭಂಗಪಟ್ಟಂತೆ ಆಗ ಮೋವಾಬ್ಯರು ತಮ್ಮ ಕೆಮೋಷ್ ದೇವತೆಯನ್ನು ಕುರಿತು ಆಶಾಭಂಗಪಡುವರು.
- Verse 14: ‘ನಾವು ಶೂರರು, ಯುದ್ಧ ಪ್ರವೀಣರು, ಪರಾಕ್ರಮಿಗಳು’ ಎಂದು ನೀವು ಹೇಳುವುದೆಂತು?
- Verse 15: ಮೋವಾಬು ಹಾಳಾಗಿದೆ ಸುಟ್ಟುಹೋದ ಅದರ ನಗರಗಳಿಂದ ಹೊಗೆ ಎದ್ದಿದೆ. ಅದರ ಸರ್ವಶ್ರೇಷ್ಟ ಯುವಕರು ಹೋಗಿದ್ದಾರೆ ಹತರಾಗುವುದಕ್ಕೆ, ಸರ್ವಶಕ್ತ ಸರ್ವೇಶ್ವರನೆಂಬ ನಾಮವುಳ್ಳ ರಾಜಾಧಿರಾಜನ ನುಡಿಯಂತೆ.
- Verse 16: ಮೋವಾಬಿಗೆ ದುರ್ಗತಿ ಸಮೀಪಿಸಿದೆ ಅದಕ್ಕೆ ವಿಪತ್ತು ಬೇಗ ಬರಲಿದೆ.
- Verse 17: ಮೋವಾಬಿನ ನೆರೆಹೊರೆಯವರೇ, ಅದರ ಹೆಸರುವಾಸಿಯನ್ನು ಅರಿತವರೇ, ನೀವೆಲ್ಲರು ಅದಕ್ಕಾಗಿ ಎದೆಬಡಿದುಕೊಳ್ಳಿ ! ‘ಅಯ್ಯೋ, ಶಕ್ತಿಯುತ ಚೆಂಗೋಲು, ಮಹಿಮೆಯ ದಂಡಕೋಲು ಮುರಿದುಹೋಯಿತಲ್ಲಾ!’ ಎಂದು ಪ್ರಲಾಪಿಸಿರಿ.
- Verse 18: ಯುವತಿಯೇ, ದೀಬೋನ್ ನಗರಿಯೇ, ನಿನ್ನ ಮಹಿಮೆಯ ಪದವಿಯಿಂದ ಕೆಳಕ್ಕಿಳಿದು ಕುಳಿತುಕೊ ಬಾಯಾರಿದವಳಂತೆ. ಮೋವಾಬನ್ನು ಹಾಳುಮಾಡುವವನು ನಿನಗೆ ವಿರುದ್ಧವಾಗಿ ಬಂದಿದ್ದಾನೆ. ನಿನ್ನ ಕೋಟೆಕೊತ್ತಲುಗಳನ್ನು ಅವನು ಕೆಡವಿದ್ದಾನೆ.
- Verse 19: ಅರೋಯೇರಿನವರೇ, ದಾರಿ ಮಗ್ಗುಲಲ್ಲಿ ನಿಂತು ನೋಡಿ ! ಓಡಿಹೋಗುವವನನ್ನೂ ತಪ್ಪಿಸಿಕೊಳ್ಳುವವಳನ್ನೂ ಏನಾಯಿತೆಂದು ವಿಚಾರಿಸಿರಿ.
- Verse 20: ಮೋವಾಬು ನಾಶವಾಗಿದೆ, ಅವಮಾನಕ್ಕೆ ಈಡಾಗಿದೆ. ಗೋಳಾಡಿರಿ, ಅತ್ತು ಪ್ರಲಾಪಿಸಿರಿ ! ಮೋವಾಬು ಹಾಳಾಯಿತೆಂದು ಅರ್ವೋನಿನ ತೀರದಲ್ಲೆಲ್ಲಾ ಘೋಷಿಸಿರಿ.
- Verse 21: ಮೇಲ್ನಾಡಿಗೆ ದಂಡನೆಯಾಗಿದೆ, ಹೋಲೇನ್, ಯಾಚಾ, ಮೇಫಾತ್, ದೀಬೋನ್, ನೆಬೋ,
- Verse 22: ಬೇತ್ದಿಬ್ಲಾತಯಿಮ್,
- Verse 23: ಕಿರ್ಯಾತಯಿಮ್, ಬೇತ್ ಗಾಮೂಲ್, ಬೇತ್ಮೆಯೋನ್, ಕೆರೀಯೋತ್,
- Verse 24: ಬೊಚ್ರ, ಹೀಗೆ ದೂರದ ಹತ್ತಿರದ ಮೋಬಾವಿನ ಎಲ್ಲ ನಗರಗಳಿಗೂ ದಂಡನೆಯಾಗಿದೆ.
- Verse 25: ಮೋವಾಬಿನ ಕೊಂಬು ಕಡಿದು ಬಿದ್ದಿದೆ. ಅದರ ತೋಳು ಮುರಿದುಹೋಗಿದೆ. ಇದು ಸರ್ವೇಶ್ವರನಾದ ನನ್ನ ನುಡಿ.”
- Verse 26: “ಮೋವಾಬಿಗೆ ಅಮಲೇರುವಷ್ಟು ಕುಡಿಸಿರಿ. ಅದು ಸರ್ವೇಶ್ವರನನ್ನೆ ತಿರಸ್ಕರಿಸಿ ಉಬ್ಬಿಹೋಗಿದೆ. ತನ್ನ ವಾಂತಿಯಲ್ಲೆ ಬಿದ್ದು ಗೇಲಿ ಪರಿಹಾಸ್ಯಕ್ಕೆ ಗುರಿಯಾಗಲಿದೆ.
- Verse 27: ಮೋವಾಬೇ, ನೀನು ಇಸ್ರಯೇಲನ್ನು ಕುರಿತು ಗೇಲಿಮಾಡುತ್ತಿದ್ದೆಯಲ್ಲವೆ? ಕಳ್ಳರ ಗುಂಪಿಗೆ ಸೇರಿ ಅದು ಸಿಕ್ಕಿಕೊಂಡಂತೆ ನಿನಗೆ ಕಾಣುತ್ತಿತ್ತೇ? ಇಸ್ರಯೇಲಿನ ಪ್ರಸ್ತಾಪ ಎತ್ತಿದಾಗಲೆಲ್ಲ ನೀನು ತಲೆಯಾಡಿಸಿ ಹಿಯ್ಯಾಳಿಸುತ್ತಿಯಲ್ಲವೆ?
- Verse 28: “ಮೋವಾಬ್ಯರೇ, ನಗರಗಳನ್ನು ಬಿಟ್ಟು ಹೋಗಿ ಬಂಡೆಗಳ ಗುಹೆಯಲ್ಲಿ ವಾಸಮಾಡಿ. ಹಳ್ಳಕೊಳ್ಳಗಳ ಆಚೆಯ ಪಕ್ಕದಲ್ಲಿ ಗೂಡನ್ನು ಕಟ್ಟಿಕೊಳ್ಳುವ ಪಾರಿವಾಳದಂತೆ ಜೀವಿಸಿರಿ.
- Verse 29: ಮೋವಾಬ್ಯರಿಗೆ ಬಹಳ ಸೊಕ್ಕೇರಿದೆ! ಅವರ ಹೆಮ್ಮೆಯ ಸುದ್ದಿ, ಡಂಭಾಚಾರ, ಅಹಂಕಾರ, ಗರ್ವ, ಸ್ವಪ್ರತಿಷ್ಠೆ ಇವುಗಳ ಸಮಾಚಾರ ನಮ್ಮ ಕಿವಿಗೆ ಬಿದ್ದಿದೆ. -
- Verse 30: ಸರ್ವೇಶ್ವರನಾದ ನಾನು ಹೇಳುವುದೇನೆಂದರೆ: ಅವರ ಗರ್ವೋದ್ರೇಕ ನನಗೆ ಗೊತ್ತಿದೆ. ಅದು ಬರೀ ಬುರುಡೆ ಮಾತ್ರ. ಅವರು ಕೊಚ್ಚಿಕೊಳ್ಳುವುದೆಲ್ಲ ನಿರರ್ಥಕವೇ ಸರಿ.
- Verse 31: ಆದಕಾರಣ ನಾನು ಮೋವಾಬಿನ ಬಗ್ಗೆ ವಿಷಾದಿಸುತ್ತೇನೆ. ಹೌದು, ಇಡೀ ನಾಡಿನ ದುರ್ಗತಿಯನ್ನು ನೋಡಿ ಪ್ರಲಾಪಿಸುತ್ತೇನೆ. ಕೀರ್ಹೆರೆಸಿನವರ ವಿಷಯದಲ್ಲೂ ನನಗೆ ವ್ಯಥೆ ಇದೆ.
- Verse 32: ‘ಸಿಬ್ಮ’ದ ದ್ರಾಕ್ಷಾಲತೆಯೇ, ಯಜ್ಜೇರಿನ ನಿಮಿತ್ತ ದುಃಖಿಸುವುದಕ್ಕಿಂತಲು ನಿನ್ನನ್ನು ಕಂಡು ಹೆಚ್ಚಾಗಿ ದುಃಖಿಸುತ್ತೇನೆ. ನಿನ್ನ ಶಾಖೆಗಳು ಸಮುದ್ರದಾಚೆಗೂ ಯಜ್ಜೇರಿನ ಸರೋವರದವರೆಗೂ ವ್ಯಾಪಿಸಿವೆ. ಈಗ ನಿನ್ನ ಹಣ್ಣುಹಂಪಲುಗಳ ಮೇಲೆ ಹಾಗು ದ್ರಾಕ್ಷೆಯ ಸುಗ್ಗಿಯ ಮೇಲೆ ಸೂರೆಗಾರ ಬಂದೆರಗಿದ್ದಾನೆ.
- Verse 33: ಹರ್ಷಾನಂದಗಳು ತೋಟಗಳಿಂದಲೂ ಮೋವಾಬಿನ ಇಡೀ ನಾಡಿನಿಂದಲೂ ತೊಲಗಿವೆ. ತೊಟ್ಟಿಗಳಲ್ಲಿ ದ್ರಾಕ್ಷಾರಸ ಇಲ್ಲದಂತಾಗಿದೆ. ಯಾರೂ ತೊಟ್ಟಿಯಲ್ಲಿ ತುಳಿಯುತ್ತಾ ಆನಂದ ಧ್ವನಿಗೈಯುತ್ತಿಲ್ಲ. ಕೇಳಿಸುವಾ ಧ್ವನಿ ಆನಂದ ಧ್ವನಿ ಅಲ್ಲ.
- Verse 34: ಹೆಷ್ಬೋನಿನ ಮತ್ತು ಎಲೆಯಾಲೆಯ ಜನರು ಅರಚಿಕೊಳ್ಳುತ್ತಿದ್ದಾರೆ. ಆ ಕೂಗು ಯಹಚಿನವರೆಗೆ ಕೇಳಿಸುತ್ತಿದೆ. ಚೋಯರಿನಿಂದ ಹೊರೊನಯಿಮಿನವರೆಗೆ ಮತ್ತು ಎಗ್ಲತ್ ಶೆಲೆಶೀಯದವರೆಗೆ ಆ ಕಿರಿಚಾಟ ಕೇಳಿಸುತ್ತಿದೆ. ನಿಮ್ರೀಮ್ ಹಳ್ಳವೂ ಹಾಳಾಗಿದೆ.
- Verse 35: “ಮೋವಾಬಿನ ಪೂಜಾಸ್ಥಾನಗಳಲ್ಲಿ ಬಲಿಯರ್ಪಿಸುವುದನ್ನೂ ತಮ್ಮ ದೇವರುಗಳಿಗೆ ಧೂಪಾರತಿಯೆತ್ತುವುದನ್ನೂ ನಿಲ್ಲಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.
- Verse 36: “ಆದುದರಿಂದ ಮೋವಾಬಿನ ಮತ್ತು ಕೀರ್ ಹೆರೆಸಿನವರ ನಿಮಿತ್ತ ನನ್ನ ಹೃದಯ ಕೊಳಲಿನಂತೆ ಮೊರೆಯಿಡುತ್ತದೆ. ಮೋವಾಬ್ಯರು ಕೂಡಿಸಿಟ್ಟ ಹೇರಳವಾದ ಆಸ್ತಿ ಮಾಯವಾಯಿತು.
- Verse 37: ಎಲ್ಲರ ತಲೆಬೋಳು, ಎಲ್ಲರ ಗಡ್ಡ ವಿಕಾರ, ಎಲ್ಲರ ಕೈ ಗಾಯ. ಎಲ್ಲರ ನಡುವಿಗೆ ಗೋಣಿತಟ್ಟು.
- Verse 38: ಮೋವಾಬಿನ ಎಲ್ಲ ಮಾಳಿಗೆಗಳ ಮೇಲೆಯೂ ಚೌಕಗಳಲ್ಲಿಯೂ ಒಂದೇ ರೋದನ. ಏಕೆಂದರೆ ಯಾರಿಗೂ ಬೇಡದ ಮಡಕೆಯಂತೆ ಮೋವಾಬನ್ನು ಒಡೆದುಹಾಕಿದ್ದೇನೆ. ಇದು ಸರ್ವೇಶ್ವರನಾದ ನನ್ನ ನುಡಿ.
- Verse 39: ಅದು ಹೇಗೆ ನುಚ್ಚುನೂರಾಗಿದೆ ! ಆ ಜನರು ಕಿರಿಚಿಕೊಳ್ಳುತ್ತಿದ್ದಾರೆ ! ಇಗೋ, ಮೋವಾಬು ನಾಚಿಕೆಯಿಂದ ಬೆನ್ನು ತೋರಿಸಿದೆ. ನೆರೆಹೊರೆಯವರು ಅಣಕಿಸುವುದಕ್ಕೂ ಬೆಚ್ಚಿಬೀಳುವುದಕ್ಕೂ ಆಸ್ಪದ ಆಗಿದೆ.” ಸರ್ವೇಶ್ವರ ಹೀಗೆನ್ನುತ್ತಾರೆ :
- Verse 40: “ಶತ್ರುವು ಮೋವಾಬಿನ ಮೇಲೆ ಎರಗಲು ರಣಹದ್ದಿನಂತೆ ರೆಕ್ಕೆಗಳನ್ನು ಹರಡಿ ಹಾರುವನು.
- Verse 41: ನಗರಗಳನ್ನು ಹಿಡಿಯುವನು, ಕೋಟೆಗಳನ್ನು ಆಕ್ರಮಿಸುವನು. ಆ ದಿನದಂದು, ಹೆರುವ ಹೆಂಗಸಿನ ಎದೆಯಂತೆ ಅದರುವುದು ಮೋವಾಬಿನ ಶೂರರ ಎದೆ.
- Verse 42: ಉಬ್ಬಿಕೊಂಡು ಸರ್ವೇಶ್ವರನನ್ನೆ ತಿರಸ್ಕರಿಸಿದ ಕಾರಣ ಹಾಳಾಗಿ ಇನ್ನು ರಾಷ್ಟ್ರವೆನಿಸಿಕೊಳ್ಳದು ಮೋವಾಬ್,
- Verse 43: ಮೋವಾಬಿನ ನಿವಾಸಿಯೇ, ಕೇಳು ನಿನಗೆ ಕಾದಿದೆ ಭೀತಿ, ಗುಳಿ, ಉರುಳು! ಇದು ಸರ್ವೇಶ್ವರನ ನುಡಿ.
- Verse 44: ಭಯಕ್ಕೆ ಓಡುವವನು ಗುಂಡಿಯಲ್ಲಿ ಬೀಳುವನು ಗುಂಡಿಯಿಂದ ಹತ್ತಿ ಬರುವವನು ಬಲೆಗೆ ಸಿಕ್ಕುವನು. ದಂಡನೆಯ ವರ್ಷವನ್ನು ಮೋವಾಬಿಗೆ ಖಂಡಿತ ಬರಮಾಡುವೆನು - ಇದು ಸರ್ವೇಶ್ವರನ ನುಡಿ.
- Verse 45: ಪಲಾಯನವಾದವರು ಹೆಷ್ಬೋನಿನ ನೆರಳಲ್ಲಿ ನಿಂತಿದ್ದಾರೆ ಬಲಗುಂದಿದವರಾಗಿ. ಆದರೆ ಸೀಹೋನನ ರಾಜ್ಯಕ್ಕೆ ಸೇರಿದ ಆ ಹೆಷ್ಬೋನಿನಿಂದಲೆ ಹೊರಟಿದೆ ಅಗ್ನಿ. ಮೋವಾಬಿನ ಮೇರೆಯನ್ನೂ ಶಿಖರವನ್ನೂ ನುಂಗಿಬಿಟ್ಟಿದೆ ಆ ಬೆಂಕಿ.
- Verse 46: ಮೋವಾಬ್ಯರೇ, ನಿಮ್ಮ ಗತಿಯೇನೆಂದು ಹೇಳಲಿ! ಕೆಮೋಷ್ ದೇವತೆಯ ಭಕ್ತರು ನಾಶವಾದರು. ನಿಮ್ಮ ಗಂಡುಹೆಣ್ಣು ಮಕ್ಕಳು ಗಡೀಪಾರಾಗಿ ಸೆರೆಯಾದರು.
- Verse 47: ಆದರೂ ಬರಲಿರುವಾ ದಿನದಂದು ತಪ್ಪಿಸುವೆನು ಮೋವಾಬಿನ ದುರವಸ್ಥೆಯನ್ನು ಎನ್ನುತ್ತಾರೆ ಸರ್ವೇಶ್ವರ. - ಇತಿ ಮೋವಾಬನ್ನು ಕುರಿತ ತೀರ್ಪು.