P. O. C ബൈബിള്
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
21ನೇ ಅಧ್ಯಾಯ
- Verse 1: ಸರ್ವೇಶ್ವರ ನನಗೆ ಈ ವಾಣಿಯನ್ನು ದಯಪಾಲಿಸಿದರು -
- Verse 2: “ನರಪುತ್ರನೇ, ನೀನು ಜೆರುಸಲೇಮಿಗೆ ಅಭಿಮುಖನಾಗಿ, ಅಲ್ಲಿನ ಪವಿತ್ರಸ್ಥಳಗಳ ಕಡೆಗೆ ಮಾತಾಡುತ್ತಾ , ಇಸ್ರಯೇಲ್ ನಾಡಿನ ಪ್ರಸ್ತಾಪವನ್ನೆತ್ತಿ ಆ ನಾಡಿಗೆ ಹೀಗೆ ಪ್ರವಾದಿಸು:
- Verse 3: ಸರ್ವೇಶ್ವರ ಇಂತೆನ್ನುತ್ತಾರೆ - ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ, ನನ್ನ ಖಡ್ಗವನ್ನು ಒರೆಯಿಂದ ಹಿರಿದು ನಿನ್ನಲ್ಲಿನ ಸಜ್ಜನರನ್ನೂ ದುರ್ಜನರನ್ನೂ ಸಂಹರಿಸಿಬಿಡುವೆನು.
- Verse 4: ನಾನು ನಿನ್ನಲ್ಲಿನ ಸಜ್ಜನರನ್ನೂ ದುರ್ಜನರನ್ನೂ ಸಂಹರಿಸಬೇಕೆಂದಿರುವುದರಿಂದ ನನ್ನ ಖಡ್ಗ ಒರೆಯಿಂದ ಹೊರಟು ದಕ್ಷಿಣದಿಂದ ಉತ್ತರವರೆಗೆ ಸಕಲ ನರಪ್ರಾಣಿಗಳ ಮೇಲೆ ಬೀಳುವುದು;
- Verse 5: ಆಗ ಸರ್ವೇಶ್ವರನಾದ ನಾನೇ ನನ್ನ ಖಡ್ಗವನ್ನು ಒರೆಯಿಂದ ಹಿರಿದಿದ್ದೇನೆ ಎಂಬುದು ಎಲ್ಲ ನರಮಾನವರಿಗೂ ತಿಳಿಯುವುದು; ಅದು ಪುನಃ ಒರೆಗೆ ಸೇರದು.
- Verse 6: ನರಪುತ್ರನೇ, ಮೊರೆಯಿಡು; ಸೊಂಟಮುರಿದಷ್ಟು ದುಃಖದಿಂದ ಜನರ ಮುಂದೆ ನರಳಾಡು.
- Verse 7: ‘ಏಕೆ ನರಳಾಡುತ್ತೀ?’ ಎಂದು ಅವರು ನಿನ್ನನ್ನು ಕೇಳುವರು. ಆಗ ನೀನು ಅವರಿಗೆ - ‘ದುರ್ವಾರ್ತೆಯ ನಿಮಿತ್ತ ನರಳುತ್ತಿದ್ದೇನೆ; ಇಗೋ, ವಿಪತ್ತು ಬಂದಿತು; ಎಲ್ಲರ ಹೃದಯವು ಕರಗಿ ನೀರಾಗುವುದು, ಎಲ್ಲರ ಕೈ ಜೋಲುಬೀಳುವುದು, ಎಲ್ಲರ ಮನಸ್ಸು ಕುಂದುವುದು, ಎಲ್ಲರ ಮೊಣಕಾಲು ನೀರಿನಂತೆ ಅದರುವುದು; ಇಗೋ, ಬಂದಿತು, ಬಂದಾಯಿತು! ಇದು ಸರ್ವೇಶ್ವರನಾದ ದೇವರ ನುಡಿ,’ ಎಂದು ಉತ್ತರಕೊಡು.”
- Verse 8: ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು:
- Verse 9: “ನರಪುತ್ರನೇ, ಪ್ರವಾದಿಸು ಸರ್ವೇಶ್ವರ ಹೀಗೆನ್ನುತ್ತಾರೆಂದು:
- Verse 10: ಆಹಾ ಖಡ್ಗ, ಖಡ್ಗ, ಸಾಣೆ ಹಿಡಿದ ಖಡ್ಗ, ಮಸೆದ ಖಡ್ಗ! ಸಾಣೆ ಹಿಡಿದಿದೆ ಹತಿಸುವಂತೆ, ಮಸೆದಿದೆ ಮಿಂಚುವಂತೆ. ಸಂಭ್ರಮಿಸಲಾದೀತೆ ‘ನಮ್ಮ ಕುಮಾರನ ರಾಜದಂಡ’ ಎಂದು? ಮಿಕ್ಕ ದಂಡಗಳನ್ನೆಲ್ಲ ಧಿಕ್ಕರಿಸುವಂಥ ದಂಡವೆಂದುಕೊಂಡು?
- Verse 11: ಬಳಕೆಗೆ ಸಿದ್ಧವಿರಲೆಂದು ಕೊಡಲಾಗಿದೆ ಆ ಖಡ್ಗ ಮಸೆಯಲಿಕ್ಕೆ ಮಸೆದು, ಸಾಣೆ ಹಿಡಿದು, ಸಜ್ಜಾಗಿದೆ ಅದು ಹತ್ಯಗಾರನ ಹಿಡಿತಕ್ಕೆ.
- Verse 12: ನರಪುತ್ರನೇ, ಕೂಗು, ಗೋಳಾಡು, ಬಡಿದುಕೋ ಎದೆ! ಎರಗಿದೆ ಆ ಖಡ್ಗ ನನ್ನ ಜನರ ಮೇಲೆ ಇಸ್ರಯೇಲಿನ ಅರಸರೆಲ್ಲರ ಮೇಲೆ ತುತ್ತಾಗುವರು ಅದಕ್ಕೆ ಜನನಾಯಕರು ಜನರೊಂದಿಗೆ.
- Verse 13: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಸಂಭವಿಸಿದೆ ಪರಿಶೋಧನೆ ಏನು ಗತಿ, ರಾಜದಂಡವೇ ನಾಶವಾದರೆ!
- Verse 14: ನರಪುತ್ರನೇ, ಪ್ರವಾದಿಸು, ಚಪ್ಪಾಳೆ ಬಡಿ, ಹತಿಸುವುದಾ ಖಡ್ಗ ಇಮ್ಮಡಿ ಮುಮ್ಮಡಿ. ಪ್ರಜೆಯನ್ನು ಸಂಹರಿಸುವುದಾ ಖಡ್ಗ ಅಧಿಪತಿಯನ್ನೇ ಸುತ್ತಲು ಬೀಸಿ ಹತಿಸುವುದಾ ಖಡ್ಗ.
- Verse 15: ನೀರಾಗುವುದು ಜನರ ಹೃದಯ, ಎಡವಿ ಬೀಳುವರು ಬಹುಜನ. ಪುರದ್ವಾರಗಳಿಗೇ ತಂದಿರುವೆನು ಹತಿಸುವಾ ಖಡ್ಗವ. ಮಿನುಗುತಿಹುದದು ಮಿಂಚಿನಂತೆ ಹರಿತವಿದೆ ವಧೆಗಾಗುವ ಕತ್ತಿಯಂತೆ.
- Verse 16: ಖಡ್ಗವೇ, ಏಕಾಗ್ರವಾಗಿ ಹೋಗು ಬಲಕೆ ಸಜ್ಜಾಗಿ ಸಾಗು ಎಡಕೆ ಹೊರಡು ನಿನ್ನ ಮುಖವಿದ್ದ ಕಡೆಗೆ.
- Verse 17: ನಾನೂ ರೋಷ ತೀರಿಸಿಕೊಳ್ವೆ ಚಪ್ಪಾಳೆ ತಟ್ಟಿ ಇದು ಸರ್ವೇಶ್ವರನಾದ ನನ್ನ ನುಡಿ.”
- Verse 18: ಸರ್ವೇಶ್ವರ ನನಗೆ ಮತ್ತೊಂದು ವಾಣಿಯನ್ನು ದಯಪಾಲಿಸಿದರು - “ನರಪುತ್ರನೇ,
- Verse 19: ಬಾಬಿಲೋನಿನ ಅರಸನ ಖಡ್ಗ ಬರುವುದಕ್ಕೆ ಎರಡು ದಾರಿಗಳುಳ್ಳ ನಕ್ಷೆಯನ್ನು ಬರೆ; ಅವೆರಡು ದಾರಿಗಳು ಒಂದೇ ದೇಶದಿಂದ ಹೊರಟಹಾಗಿರಲಿ; ಒಂದೊಂದು ಪಟ್ಟಣಕ್ಕೆ ಹೋಗುವ ದಾರಿಯ ಮೊದಲಲ್ಲಿ ಕೈಮರವನ್ನು ಚಿತ್ರಿಸು.
- Verse 20: ಅಮ್ಮೋನ್ಯರ ರಬ್ಬಾ ಪಟ್ಟಣಕ್ಕೂ ಜುದೇಯದಲ್ಲಿ ಕೋಟೆಕೊತ್ತಲಗಳಿಂದ ಕೂಡಿದ ಜೆರುಸಲೇಮಿಗೂ ಆ ಖಡ್ಗ ಬರುವುದಕ್ಕೆ ದಾರಿಗಳನ್ನು ಮಾಡು.
- Verse 21: ಮಾರ್ಗ ಕವಲೊಡೆಯುವ ಸ್ಥಳದಲ್ಲಿ, ಎರಡು ದಾರಿಗಳ ಪ್ರಾರಂಭದಲ್ಲಿ ಬಾಬಿಲೋನಿನ ಅರಸ ಶಕುನ ನೋಡಲು ನಿಂತಿರುವನು. ಬಾಣಗಳನ್ನು ಕಲಕಿ, ವಿಗ್ರಹಗಳನ್ನು ಪ್ರಶ್ನೆ ಕೇಳಿ, ಹಸ್ತರೇಖೆಯನ್ನು ಪರೀಕ್ಷಿಸಿದ್ದಾನೆ.
- Verse 22: ಜೆರುಸಲೇಮ್ ಗುರುತಿನ ಬಾಣ ಅವನ ಬಲಗೈಗೆ ಸಿಕ್ಕಿದೆ; ಭಿತ್ತಿಭೇದಕ ಯಂತ್ರಗಳನ್ನು ಪುರದ್ವಾರಗಳೆದುರಿಗೆ ನಿಲ್ಲಿಸಿ, ಬಾಯಿತೆರೆದು ಸಂಹಾರ ಧ್ವನಿಮಾಡಿ, ಹೌದು ಭಿತ್ತಿಭೇದಕಯಂತ್ರಗಳನ್ನು ಪುರದ್ವಾರಗಳೆದುರಿಗೆ ನಿಲ್ಲಿಸಿ, ದಿಬ್ಬಹಾಕಿ, ಒಡ್ಡು ಕಟ್ಟಬೇಕೆಂಬ ಸೂಚನೆ ಅದರಿಂದ ಬಂದಿತು.
- Verse 23: ಆದರೆ ಪುರನಿವಾಸಿಗಳು ತಾವು ಆ ಅರಸನಿಂದ ಮಾಡಿಸಿಕೊಂಡ ಪ್ರಮಾಣಗಳಲ್ಲಿ ಭರವಸೆಯಿಟ್ಟು, ಈ ಶಕುನವು ಸುಳ್ಳೆಂದು ಭಾವಿಸುವರು; ಆದರೆ ಅವರು ತನ್ನ ಕೈಗೆ ಸಿಕ್ಕಿಬೀಳಲೆಂದು ಅವರ ಅಧರ್ಮವನ್ನು ಅವನು ಬೆಳಕಿಗೆ ತರುವನು.
- Verse 24: ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ನಿಮ್ಮ ಅಪರಾಧಗಳು ಬೆಳಕಿಗೆ ಬಂದು, ನಿಮ್ಮ ಪಾಪಗಳು ನಿಮ್ಮ ಕಾರ್ಯಗಳಲ್ಲೆಲ್ಲಾ ಪ್ರತ್ಯಕ್ಷವಾಗಿ, ನೀವು ನಿಮ್ಮ ಅಧರ್ಮವನ್ನು ನನ್ನ ನೆನಪಿಗೆ ತಂದಿರುವಿರಿ; ಆದಕಾರಣ ಶತ್ರುವಿನ ಕೈಗೆ ಸಿಕ್ಕಿಬೀಳುವಿರಿ.
- Verse 25: ಇಸ್ರಯೇಲಿನ ದೊರೆಯೇ, ದುಷ್ಟನೇ, ಭ್ರಷ್ಟನೇ, ನಿನಗೆ ಸಮಯವು ಸಮೀಪಿಸಿದೆ; ಇದೇ ನಿನ್ನ ಅಪರಾಧದ ಕಡೆಗಾಲ.
- Verse 26: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಿನ್ನ ರುಮಾಲನ್ನು ಕಿತ್ತುಬಿಡು, ಕಿರೀಟವನ್ನು ತೆಗೆದುಹಾಕು. ಎಲ್ಲವೂ ಮೊದಲಿದ್ದ ಹಾಗೆ ಇರುವುದಿಲ್ಲ; ಕೆಳಗಿರುವುದನ್ನು ಮೇಲೆ ಸೇರಿಸಲಾಗುವುದು, ಮೇಲಿರುವುದನ್ನು ಕೆಳಕ್ಕಿಳಿಸಲಾಗುವುದು.
- Verse 27: ಧ್ವಂಸ, ಧ್ವಂಸ, ನಾನು ಧ್ವಂಸ ಮಾಡುವೆನು; ರಾಜ್ಯಕ್ಕೆ ಬಾಧ್ಯನು ಬರುವುದರೊಳಗೆ ಒಂದೂ ಇದ್ದಂತಿರದು; ಅವನಿಗೇ ರಾಜ್ಯವನ್ನು ವಹಿಸುವೆನು.
- Verse 28: “ನರಪುತ್ರನೇ, ನೀನು ದೈವಸಂಕಲ್ಪವನ್ನು ಪ್ರಕಟಿಸುತ್ತಾ ಹೀಗೆ ನುಡಿ - ಅಮ್ಮೋನ್ಯರ ವಿಷಯದಲ್ಲೂ ಅವರು ಮಾಡುವ ದೂಷಣೆಯ ವಿಷಯದಲ್ಲೂ ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ಖಡ್ಗ, ಖಡ್ಗ, ಸಂಹರಿಸುವುದಕ್ಕೆ ಹಿರಿದಿದೆ; ಮಿಂಚುವಂತೆ ಪೂರ್ಣ ಮಸೆಯಲಾಗಿದೆ.
- Verse 29: ಅಮ್ಮೋನೇ, ನಿನ್ನ ಜೋಯಿಸರು ಮಿಥ್ಯೆಯನ್ನು ಕಲ್ಪಿಸಿಕೊಂಡು ಸುಳ್ಳುಸುಳ್ಳಾಗಿ ಕಣಿ ಹೇಳುತ್ತಿದ್ದಾರೆ. ಸಮಯವು ಸಮೀಪಿಸಿ ಅಪರಾಧದ ಕಡೆಗಾಲವು ಸಂಭವಿಸಿ ಹತರಾಗಿ ಬಿದ್ದಿರುವ ದುಷ್ಟರ ಗತಿಯನ್ನು ನೋಡು; ಜೋಯಿಸರನ್ನು ನಂಬಿದ ನೀನೂ ಆ ದುಷ್ಟರ ಕತ್ತುಗಳ ಮೇಲೆ ಬೀಳುವೆ.
- Verse 30: ಕತ್ತಿಯನ್ನು ಒರೆಗೆ ಸೇರಿಸು. ನೀನು ಹುಟ್ಟಿದ ಸ್ಥಳದಲ್ಲಿ, ನಿನ್ನ ಜನ್ಮಭೂಮಿಯಲ್ಲಿ, ನಿನಗೆ ನ್ಯಾಯತೀರಿಸುವೆನು.
- Verse 31: ನಿನ್ನ ಮೇಲೆ ನನ್ನ ಕೋಪವನ್ನು ಸುರಿಸಿ, ರೋಷಾಗ್ನಿಯನ್ನು ಕಾರಿ, ಕ್ರೂರಿಗಳನ್ನು ಹಾಳುಮಾಡುವುದರಲ್ಲಿ ಗಟ್ಟಿಗರಾದವರ ಕೈಗೆ ಸಿಕ್ಕಿಸುವೆನು.
- Verse 32: ನೀನು ಅಗ್ನಿಗೆ ಆಹುತಿಯಾಗುವೆ; ನೀನು ರಕ್ತ ನಾಡಿನಲ್ಲೆಲ್ಲಾ ಇಂಗಿರುವುದು; ನೀನು ಇನ್ನು ನೆನಪಿಗೆ ಬರುವುದಿಲ್ಲ; ಸರ್ವೇಶ್ವರನಾದ ನಾನೇ ಇದನ್ನು ನುಡಿದಿದ್ದೇನೆ.”