P. O. C ബൈബിള്
ಹಳೆಯ ಒಡಂಬಡಿಕೆ
ದಾನಿಯೇಲನು
7ನೇ ಅಧ್ಯಾಯ
- Verse 1: ಬಾಬಿಲೋನಿನ ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ದಾನಿಯೇಲನು ಹಾಸಿಗೆಯ ಮೇಲೆ ಮಲಗಿದ್ದಾಗ ಒಂದು ಕನಸು ಕಂಡನು. ಅವನ ಮನಸ್ಸಿಗೆ ಒಂದು ದೃಶ್ಯ ಕಾಣಿಸಿತು. ಕೂಡಲೆ ಅವನು ಆ ಕನಸನ್ನೂ ಅದರ ಮುಖ್ಯಾಂಶಗಳನ್ನೂ ಬರೆದಿಟ್ಟನು.
- Verse 2: ಅದರ ಸಾರಾಂಶ ಇದು: ನಾನು ರಾತ್ರಿ ಕಂಡ ಕನಸಿನಲ್ಲಿ ನಾಲ್ಕು ದಿಕ್ಕುಗಳಿಂದಲೂ ಗಾಳಿ ಮಹಾಸಾಗರದ ಮೇಲೆ ರಭಸವಾಗಿ ಬೀಸಿ ಬಡಿಯುತ್ತಿತ್ತು.
- Verse 3: ವಿಲಕ್ಷಣವಾದ ನಾಲ್ಕು ದೊಡ್ಡ ಮೃಗಗಳು ಆ ಸಾಗರದಿಂದ ಹೊರಗೆ ಬಂದವು.
- Verse 4: ಮೊದಲು ಕಾಣಿಸಿದ ಮೃಗ ಸಿಂಹದ ಹಾಗಿತ್ತು. ಆದರೆ ಅದಕ್ಕೆ ಹದ್ದಿನಂಥ ರೆಕ್ಕೆಗಳಿದ್ದವು. ನಾನು ನೋಡುತ್ತಿರುವಾಗಲೆ ಆ ರೆಕ್ಕೆಗಳು ಕೀಳಲ್ಪಟ್ಟವು. ಆ ಮೃಗವನ್ನು ನೆಲದಿಂದ ಮೇಲಕ್ಕೆತ್ತಿ ಮನುಷ್ಯನ ಹಾಗೆ ಎರಡು ಕಾಲುಗಳ ಮೇಲೆ ನಿಲ್ಲಿಸಲಾಯಿತು. ಅದಕ್ಕೆ ಮನುಷ್ಯನ ಹೃದಯ ಕೊಡಲಾಯಿತು.
- Verse 5: ಬಳಿಕ ಎರಡನೆಯ ಇನ್ನೊಂದು ಮೃಗವನ್ನು ಕಂಡೆ. ಅದು ಕರಡಿಯ ಹಾಗಿತ್ತು. ಒಂದು ಹೆಗಲನ್ನು ಮೇಲಕ್ಕೆ ಎತ್ತಿಕೊಂಡಿತ್ತು. ತನ್ನ ಬಾಯಲ್ಲಿನ ಹಲ್ಲುಗಳ ನಡುವೆ ಮೂರು ಪಕ್ಕೆಲುಬುಗಳನ್ನು ಕಚ್ಚಿಕೊಂಡಿತ್ತು. “ನೀನೆದ್ದು ಬೇಕಾದಷ್ಟು ಮಾಂಸವನ್ನು ತಿನ್ನು,” ಎಂದು ಅದಕ್ಕೆ ಹೇಳಲಾಯಿತು.
- Verse 6: ಅನಂತರ ನಾನು ನೋಡುತ್ತಿರುವಾಗಲೆ ಚಿರತೆಯ ಹಾಗಿದ್ದ ಮತ್ತೊಂದು ಮೃಗ ಕಾಣಿಸಿತು. ಅದರ ಪಕ್ಕಗಳಲ್ಲಿ ಪಕ್ಷಿಯ ರೆಕ್ಕೆಗಳಂತಿರುವ ನಾಲ್ಕು ರೆಕ್ಕೆಗಳಿದ್ದವು. ಆ ಮೃಗಕ್ಕೆ ನಾಲ್ಕು ತಲೆಗಳಿದ್ದವು. ಅದಕ್ಕೆ ದೊರೆತನ ಕೊಡಲಾಯಿತು.
- Verse 7: ಇದಾದ ಬಳಿಕ ಆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ನಾಲ್ಕನೇ ಮೃಗ ಭಯಂಕರವಾಗಿತ್ತು. ಹೆದರಿಸುವಂಥದಾಗಿತ್ತು. ಅಧಿಕ ಬಲವುಳ್ಳದ್ದಾಗಿತ್ತು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ತನ್ನ ಬಲಿಯನ್ನು ತುಂಡುತುಂಡಾಗಿಸಿ ಕಬಳಿಸುತ್ತಿತ್ತು. ಮಿಕ್ಕದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಮುಂಚಿನ ಮೃಗಗಳಿಗಿಂತ ವಿಲಕ್ಷಣವಾಗಿತ್ತು. ಅದಕ್ಕೆ ಹತ್ತು ಕೊಂಬುಗಳಿದ್ದವು.
- Verse 8: ನಾನು ಆ ಕೊಂಬುಗಳನ್ನು ಗಮನಿಸುತ್ತಿರುವಾಗಲೆ ಅವುಗಳ ನಡುವೆ ಇಗೋ ಇನ್ನೊಂದು ಚಿಕ್ಕ ಕೊಂಬು ಮೊಳೆಯಿತು. ಅದಕ್ಕೆ ಎಡೆಮಾಡಿಕೊಡಲು ಮುಂಚಿನ ಕೊಂಬುಗಳಲ್ಲಿ ಮೂರನ್ನು ಬೇರುಸಹಿತ ಕೀಳಲಾಯಿತು. ಆಶ್ಚರ್ಯವೆಂದರೆ, ಆ ಕೊಂಬಿನಲ್ಲಿ ಮನುಷ್ಯನ ಕಣ್ಣುಗಳಂತಿರುವ ಕಣ್ಣುಗಳಿದ್ದವು. ಬಡಾಯಿ ಕೊಚ್ಚಿಕೊಳ್ಳುವ ಬಾಯೂ ಇತ್ತು.
- Verse 9: ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು.
- Verse 10: ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದುಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪುನೀಡಲು ಕುಳಿತುಕೊಂಡರು. ಪಟ್ಟಿಪುಸ್ತಕಗಳನ್ನು ತೆರೆಯಲಾಯಿತು.
- Verse 11: ನಾನು ನೋಡುತ್ತಾ ಇದ್ದೆ: ಆ ಕಿರುಕೊಂಬು ಬಡಾಯಿಕೊಚ್ಚಿಕೊಂಡ ನಿಮಿತ್ತ ಆ ಕೊಂಬಿನ ಮೃಗವನ್ನು ಕೊಂದು ಅದರ ಹೆಣವನ್ನು ಉರಿಯುವ ಬೆಂಕಿಗೆ ಹಾಕಿ ನಾಶಮಾಡಿದರು.
- Verse 12: ಮಿಕ್ಕ ಮೃಗಗಳ ದೊರೆತನವನ್ನು ತೆಗೆದುಬಿಟ್ಟರು. ಆದರೆ ಕೆಲವು ಕಾಲದ ಮಟ್ಟಿಗೆ, ತಕ್ಕ ಸಮಯ ಬರುವ ತನಕ, ಅವುಗಳ ಜೀವಾವಧಿಯನ್ನು ಉಳಿಸಿದರು.
- Verse 13: ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು.
- Verse 14: ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!
- Verse 15: ದಾನಿಯೇಲನಾದ ನನ್ನ ಮನ ಒಳಗೇ ವ್ಯಥೆಗೊಂಡಿತು. ನನ್ನ ಮನಸ್ಸಿನಲ್ಲಿ ತೋಚಿದ ದರ್ಶನಗಳು ನನ್ನನ್ನು ಕಳವಳಪಡಿಸಿದವು.
- Verse 16: ಹತ್ತಿರದಲ್ಲೆ ನಿಂತಿದ್ದವರಲ್ಲಿ ಒಬ್ಬನ ಬಳಿಗೆ ಹೋಗಿ ಇವುಗಳ ಸರಿಯಾದ ಅರ್ಥ ಏನೆಂದು ವಿಚಾರಿಸಿದೆ.
- Verse 17: ಅವನು ನನಗೆ: “ಆ ನಾಲ್ಕು ದೊಡ್ಡ ಮೃಗಗಳು ಲೋಕಸಾಗರಗಳಿಂದ ಏರತಕ್ಕ ನಾಲ್ಕು ರಾಜ್ಯಗಳು.
- Verse 18: ಆದರೆ ರಾಜ್ಯಾಧಿಕಾರ ಲಭಿಸುವುದು ಮಹೋನ್ನತರ ಪವಿತ್ರ ಪ್ರಜೆಗೆ. ಅದನ್ನು ತಲತಲಾಂತರಕ್ಕೂ ಶಾಶ್ವತವಾಗಿ ಅನುಭವಿಸುವವರು ಅವರೇ,” ಎಂದು ಆ ವಿಷಯಗಳ ತಾತ್ಪರ್ಯವನ್ನು ವಿವರಿಸಿ ತಿಳಿಸಿದನು.
- Verse 19: ಅದಾದ ಮೇಲೆ ಇತರ ಮೃಗಗಳಿಗಿಂತ ವಿಲಕ್ಷಣವಾಗಿಯೂ ಅತಿಭಯಂಕರವಾಗಿಯೂ ಕಬ್ಬಿಣದ ಹಲ್ಲು, ಕಂಚಿನ ಉಗುರು ಉಳ್ಳದ್ದಾಗಿಯೂ ತನ್ನ ಬಲಿಯನ್ನು ತುಂಡುತುಂಡಾಗಿಸಿ ಕಬಳಿಸುತ್ತಿದ್ದ ಹಾಗು ಮಿಕ್ಕದ್ದನ್ನು ಕಾಲಿನಿಂದ ತುಳಿಯುತ್ತಿದ್ದ ಆ ನಾಲ್ಕನೆಯ ಮೃಗದ ವಿಷಯವನ್ನು ತಿಳಿದುಕೊಳ್ಳಲು ಬಯಸಿದೆ.
- Verse 20: ಅದರ ತಲೆಯ ಮೇಲಿದ್ದ ಹತ್ತು ಕೊಂಬುಗಳ ವಿಷಯವಾಗಿಯೂ,
- Verse 21: ನಾನು ನೋಡುತ್ತಿದ್ದ ಹಾಗೆ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ, ತನ್ನಲ್ಲೆ ಕಣ್ಣುಳ್ಳದ್ದಾಗಿ ಬಡಾಯಿ ಕೊಚ್ಚಿಕೊಳ್ಳುವ ಬಾಯುಳ್ಳದ್ದಾಗಿ, ಮಿಕ್ಕ ಕೊಂಬುಗಳಿಗಿಂತ ಭಯಂಕರವಾಗಿ ಕಾಣಿಸುತ್ತಾ ಇತ್ತೋ, ಆ ಕೊಂಬಿನ ವಿಷಯವಾಗಿ ಸತ್ಯಾರ್ಥವನ್ನೂ ತಿಳಿದುಕೊಳ್ಳಬೇಕೆಂದು ವಿಚಾರಿಸಿದೆ.
- Verse 22: ಆ ಕೊಂಬು ಪವಿತ್ರ ಪ್ರಜೆಯೊಂದಿಗೆ ಯುದ್ಧಮಾಡುತ್ತಿತ್ತು. ಮಹಾವೃದ್ಧನು ಬಂದು ಮಹೋನ್ನತರ ಆ ಪವಿತ್ರ ಪ್ರಜೆಗೆ ನ್ಯಾಯತೀರಿಸಿ ಅವರಿಗೆ ರಾಜ್ಯವನ್ನು ದೊರಕಿಸುವ ತನಕ ಅವರನ್ನು ಗೆಲ್ಲುತ್ತಾ ಬಂದಿತ್ತು.
- Verse 23: ಆಗ ಅವನು ನನಗೆ ಕೊಟ್ಟ ವಿವರ ಇದು: “ಆ ನಾಲ್ಕನೆಯ ಮೃಗ ಲೋಕದಲ್ಲಿ ತಲೆಯೆತ್ತುವ ನಾಲ್ಕನೆಯ ರಾಜ್ಯ. ಅದು ಮಿಕ್ಕ ರಾಜ್ಯಗಳಿಗಿಂತ ವಿಲಕ್ಷಣವಾದುದು. ಲೋಕವನ್ನೇ ಕಾಲಿನಿಂದ ತುಳಿದು ಚೂರುಚೂರು ಮಾಡಿ ಕಬಳಿಸುವುದು.
- Verse 24: ಆ ಹತ್ತು ಕೊಂಬುಗಳು ಅದೇ ರಾಜ್ಯವನ್ನು ಆಳುವ ಹತ್ತುಮಂದಿ ಅರಸರು. ಅವರ ತರುವಾಯ ಮತ್ತೊಬ್ಬನು ತಲೆದೋರುವನು. ಅವನು ಮುಂಚಿನ ಅರಸರಿಗಿಂತ ವಿಲಕ್ಷಣವಾಗಿರುವನು, ಆ ಮೂವರು ಅರಸರನ್ನು ಸದೆಬಡಿದುಬಿಡುವನು.
- Verse 25: ಅವನು ಮಹೋನ್ನತ ದೇವರಿಗೆ ವಿರುದ್ಧವಾಗಿ ಕೊಚ್ಚಿಕೊಳ್ಳುವನು. ಮಹೋನ್ನತರ ಪವಿತ್ರ ಪ್ರಜೆಯನ್ನು (ಸಂತರನ್ನು) ಶೋಷಣೆಗೆ ಗುರಿಮಾಡುವನು. ಆ ಪ್ರಜೆ ಅವನಿಗೆ ಮೂರುವರೆ ವರ್ಷ ಅಧೀನರಾಗಿರುವರು.
- Verse 26: ಆದರೆ (ದೇವರ) ನ್ಯಾಯಸಭೆ ತೀರ್ಪಿತ್ತು, ಅವನ ದೊರೆತನವನ್ನು ಕಿತ್ತು, ವಿನಾಶಮಾಡಿ, ಕೊನೆಗಾಣಿಸಿಬಿಡುವುದು.
- Verse 27: ರಾಜ್ಯಭಾರವೂ ದೊರೆತನವೂ ಸಮಸ್ತ ಲೋಕದಲ್ಲಿನ ರಾಜ್ಯಗಳ ಮಹಿಮೆಯೂ ಮಹೋನ್ನತರ ಭಕ್ತಜನರಿಗೆ ಕೊಡಲಾಗುವುದು. ಅವರ ರಾಜ್ಯ ಶಾಶ್ವತರಾಜ್ಯ. ಎಲ್ಲ ದೇಶಾಧಿಪತಿಗಳೂ ಅವರಿಗೆ ಅಧೀನರಾಗಿ ಸೇವೆಮಾಡುವರು,” ಎಂದು ಹೇಳಿದನು.
- Verse 28: ಇಲ್ಲಿಗೆ ಆ ಕನಸಿನ ವಿವರ ಮುಗಿಯಿತು. ದಾನಿಯೇಲನಾದ ನಾನು ನನ್ನ ಆಲೋಚನೆಗಳಿಂದ ಬಹಳ ಕಳವಳಗೊಂಡೆ. ನನ್ನ ಮುಖ ಬಾಡಿತು. ಆದರೂ ನಡೆದ ಸಂಗತಿಯನ್ನು ಮನಸ್ಸಿನಲ್ಲೇ ಇಟ್ಟುಕೊಂಡೆ.