పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
115ನೇ ಅಧ್ಯಾಯ
1 : ನಮಗಲ್ಲ ಹೇ ಪ್ರಭು, ನಮಗಲ್ಲ ಮಹಿಮೆ I ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ I ನಿನ್ನ ನೀತಿ ಸತ್ಯತೆಗಳ ನಿಮಿತ್ತವೆ II
2 : ಅನ್ಯಜನರು ನುಡಿಯುವುದೆಂತು : I “ಅವರ ದೇವರೆಲ್ಲಿ?” ಎಂದು II
3 : ಪರದಲ್ಲಿಹನು ನಮ್ಮ ದೇವನು I ಗೈವನು ತನಗಿಷ್ಟ ಬಂದುದನು II
4 : ಅವರ ವಿಗ್ರಹ ಬರೀ ಬೆಳ್ಳಿ ಬಂಗಾರ I ಅವು ಮಾನವನ ಕೈ ಕೆಲಸಗಳು ಮಾತ್ರ II
5 : ಬಾಯಿದ್ದರೂ ಅವು ಮಾತಾಡುವುದಿಲ್ಲ I ಕಣ್ಣುಗಳಿದ್ದರೂ ಅವು ಕಾಣುವುದಿಲ್ಲ II
6 : ಕಿವಿಯಿದ್ದರೂ ಅವು ಕೇಳುವುದಿಲ್ಲ I ಮೂಗಿದ್ದರೂ ಅವು ಮೂಸುವುದಿಲ್ಲ I ಗಂಟಲೊಳು ಅವಕೆ ಶಬ್ದವೇ ಇಲ್ಲ II
7 : ಕೈಯಿದ್ದರೂ ಅವು ಮುಟ್ಟುವುದಿಲ್ಲ I ಕಾಲಿದ್ದರೂ ಅವು ನಡೆಯುವುದಿಲ್ಲ II
8 : ಅವುಗಳಂತಾಗುವರು ಅವುಗಳನು ಮಾಡುವವರು I ಅವುಗಳಂತಾಗುವರು ಅವುಗಳನು ನಂಬುವವರು II
9 : ಪ್ರಭುವಿನಲ್ಲಿದೆ ಭರವಸೆ ಇಸ್ರಯೇಲ್ ಜನರಿಗೆ I ಆತನೇ ಸಹಾಯಕ, ರಕ್ಷಾಕವಚ ಅವರಿಗೆ II
10 : ಪ್ರಭುವಿನಲ್ಲಿದೆ ಭರವಸೆ ಆರೋನನ ಕುಲಕೆ I ಆತನೇ ಸಹಾಯಕ, ರಕ್ಷಾಕವಚ ಅವರಿಗೆ II
11 : ಪ್ರಭುವಿನಲ್ಲಿದೆ ಭರವಸೆ ಆತನ ಭಕ್ತಜನರಿಗೆ I ಆತನೇ ಸಹಾಯಕ, ರಕ್ಷಾಕವಚ ಅವರಿಗೆ II
12 : ಆಶೀರ್ವದಿಸುವನು ಪ್ರಭು ಮರೆಯದೆ ನಮ್ಮನು I ಇಸ್ರಯೇಲ್ ವಂಶವನು, ಆರೋನನ ಕುಲವನು II
13 : ಆಶೀರ್ವದಿಸುವನು ಪ್ರಭು ತನ್ನಲಿ ಭಯಭಕ್ತಿಯುಳ್ಳವರನು I ಚಿಕ್ಕವರು ದೊಡ್ಡವರೆನ್ನದೆ ಭಯಭಕ್ತಿಯುಳ್ಳವರನು II
14 : ವೃದ್ಧಿಗೊಳಿಸಲಿ ಪ್ರಭುವು ನಿಮ್ಮನು I ವೃದ್ಧಿಗೊಳಿಸಲಿ ನಿಮ್ಮ ಮಕ್ಕಳನು II
15 : ಇಹಪರಗಳನು ಉಂಟುಮಾಡಿದ ಪ್ರಭುವಿಂದ I ಲಭಿಸುವಂತಾಗಲಿ ನಿಮಗೆ ಆಶೀರ್ವಾದ II
16 : ಪ್ರಭುವಿಗೆ ಸ್ವಂತವಾದುದು ಪರಲೋಕ I ನರರಿಗೆ ಕೊಟ್ಟಿಹನಾತನು ಭೂಲೋಕ II
17 : ಸ್ತುತಿಸುವುದಿಲ್ಲ ಸತ್ತವರಾರೂ ಪ್ರಭುವನು I ಕೀರ್ತಿಸರು ಪಾತಾಳಕ್ಕಿಳಿವವರು ಆತನನು II
18 : ನಾವಾದರೋ ಪ್ರಭುವನು ಹೊಗಳಿ ಹಾಡುವೆವು I ಇಂದಿಗೂ ಎಂದೆಂದಿಗೂ ಹೊಗಳಿ ಹಾಡುವೆವು II ಅಲ್ಲೆಲೂಯ.