ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
2 ಕೊರಿಂಥಿಯರಿಗೆ
5ನೇ ಅಧ್ಯಾಯ
- Verse 1: ಭೂಮಿಯ ಮೇಲಿನ ನಮ್ಮ ಈ ದೇಹ ಎಂಬ ಗುಡಾರವು ನಾಶವಾಗಿಹೋದರೂ ಸ್ವರ್ಗದಲ್ಲಿ ಶಾಶ್ವತವಾದ ಗೃಹವೊಂದು ನಮಗೆ ದೊರಕುವುದು. ಅದು ಮಾನವರಿಂದ ನಿರ್ಮಿತ ಆದುದಲ್ಲ, ದೇವರಿಂದಲೇ ನಿರ್ಮಿತವಾದುದು. ಇದು ನಮಗೆ ತಿಳಿದ ವಿಷಯ.
- Verse 2: ಈ ಗುಡಾರದಲ್ಲಿರುವವರೆಗೆ ನಾವು ನರಳುತ್ತೇವೆ; ಸ್ವರ್ಗೀಯ ನಿವಾಸವನ್ನು ನಮ್ಮ ದೇಹದ ಮೇಲೆ ಎಂದಿಗೆ ನಾವು ಧರಿಸಿಕೊಳ್ಳುತ್ತೇವೋ ಎಂದು ಹಾತೊರೆಯುತ್ತೇವೆ.
- Verse 3: ಅದನ್ನು ಧರಿಸಿಕೊಂಡಾಗ ನಾವು ಬೆತ್ತಲೆಯಾಗಿ ಇರಲಾರೆವು.
- Verse 4: ನಾವು ಈ ದೇಹವೆಂಬ ಗುಡಾರದಲ್ಲಿರುವ ತನಕ ನರಳುತ್ತೇವೆ, ಭಾರದಿಂದ ಬಳಲುತ್ತೇವೆ. ಈ ದೇಹವು ಕಳಚಿಹೋಗಬೇಕೆಂಬುದು ನಮ್ಮ ಬಯಕೆ ಅಲ್ಲ. ನಶ್ವರವಾದುದು ನುಂಗಿಹೋಗಿ ಅಮರವಾದುದು ಉಳಿಯಬೇಕೆಂದೇ ಈ ಗು಼ಡಾರದ ಮೇಲೆ ಆ ನಿವಾಸವನ್ನು ಧರಿಸಿಕೊಳ್ಳಲು ಅಪೇಕ್ಷಿಸುತ್ತೇವೆ.
- Verse 5: ಈ ಸುಸ್ಥಿತಿಗಾಗಿಯೇ ದೇವರು ನಮ್ಮನ್ನು ಸಿದ್ಧಗೊಳಿಸಿದ್ದಾರೆ. ಇದಕ್ಕೆಲ್ಲಾ ಖಾತರಿಯಾಗಿ ಪವಿತ್ರಾತ್ಮರನ್ನೇ ನಮಗೆ ದಯಪಾಲಿಸಿದ್ದಾರೆ.
- Verse 6: ಈ ಕಾರಣದಿಂದಲೇ ನಾವು ಸದಾ ಸ್ಥಿರಚಿತ್ತರಾಗಿದ್ದೇವೆ. ಈ ದೇಹವನ್ನೇ ನೆಚ್ಚಿ ಇದರಲ್ಲೇ ನೆಲೆಯಾಗಿರುವವರೆಗೂ ನಾವು ಪ್ರಭುವಿನಿಂದ ದೂರವಿರುವ ಪ್ರವಾಸಿಗಳಂತೆ ಇದ್ದೇವೆ.
- Verse 7: ನಾವು ನೋಡಿ ನಡೆಯುವವರಲ್ಲ, ನಂಬಿ ನಡೆಯುವವರು.
- Verse 8: ಆದ್ದರಿಂದ ಈ ದೇಹವನ್ನು ತ್ಯಜಿಸಿ, ಪ್ರಭುವನ್ನೇ ನೆಚ್ಚಿ ನೆಲಸುವುದು ಲೇಸೆಂದು ಧೈರ್ಯದಿಂದ ಹೇಳುತ್ತೇವೆ.
- Verse 9: ಈ ಕಾರಣ, ಇಲ್ಲಾದರೂ ಸರಿ, ಅಲ್ಲಾದರೂ ಸರಿ, ಪ್ರಭು ಮೆಚ್ಚುವಂತೆ ಬಾಳುವುದೊಂದೇ ನಮ್ಮ ಗುರಿ.
- Verse 10: ನಾವು ಎಲ್ಲರೂ ನ್ಯಾಯವಿಚಾರಣೆಗಾಗಿ ಕ್ರಿಸ್ತಯೇಸುವಿನ ಮುಂದೆ ನಿಲ್ಲಲೇಬೇಕು. ಪ್ರತಿಯೊಬ್ಬನೂ ತನ್ನ ದೈಹಿಕ ಜೀವನದಲ್ಲಿ ಮಾಡಿದ ಪಾಪ ಪುಣ್ಯಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ಪಡೆಯಲೇಬೇಕು.
- Verse 11: ಪ್ರಭುವಿನ ಭಯಭಕ್ತಿ ನಮಗಿರುವುದರಿಂದ ನಾವು ಮಾನವರ ಮನವೊಲಿಸಲು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲರು. ಅದು ನಿಮ್ಮ ಮನಸ್ಸಾಕ್ಷಿಗೂ ಅರಿವಾಗಿದೆಯೆಂದು ನಂಬುತ್ತೇವೆ.
- Verse 12: ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬಾರದು. ನಮ್ಮನ್ನು ಕುರಿತು ನೀವೇ ಹೆಚ್ಚಳಪಡುವಂತೆ ಒಂದು ಅವಕಾಶವನ್ನು ಒದಗಿಸುತ್ತಿದ್ದೇವೆ, ಅಷ್ಟೆ. ಹೀಗೆ, ಮನುಷ್ಯನ ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಗಳನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ.
- Verse 13: ನಮಗೆ ಬುದ್ಧಿಭ್ರಮಣೆಯಾಗಿದೆಯೆಂದು ಭಾವಿಸುತ್ತೀರೋ? ಹಾಗಿದ್ದರೆ ಅದು ದೇವರ ಮಹಿಮೆಗಾಗಿ ನಾವು ಸ್ವಸ್ಥಬುದ್ಧಿಯುಳ್ಳವರೆಂದು ನೆನೆಸುತ್ತೀರೋ? ಹಾಗಿದ್ದರೆ ಅದು ನಿಮ್ಮ ಹಿತಕ್ಕಾಗಿ.
- Verse 14: ಯೇಸುಕ್ರಿಸ್ತರ ಪ್ರೀತಿಯ ಪಾಲನೆಗೆ ನಾವು ಒಳಗಾಗಿದ್ದೇವೆ. ಎಲ್ಲಾ ಮಾನವರಿಗೋಸ್ಕರ ಒಬ್ಬನು ಮರಣಹೊಂದಿದನು. ಆದ್ದರಿಂದ ನಾವೆಲ್ಲರೂ ಆ ಮರಣದಲ್ಲಿ ಪಾಲುಗಾರರು.
- Verse 15: ಸರ್ವರಿಗಾಗಿ ಯೇಸು ಪ್ರಾಣತ್ಯಾಗ ಮಾಡಿದರು. ಪರಿಣಾಮವಾಗಿ, ಇನ್ನು ಮುಂದೆ ಜೀವಿಸುವವರು ತಮಗಾಗಿ ಜೀವಿಸದೆ, ಸತ್ತು ಪುನರುತ್ಥಾನರಾದ ಯೇಸುವಿಗಾಗಿ ಜೀವಿಸಬೇಕು.
- Verse 16: ಇನ್ನು ಮುಂದೆ ನಾವು ಯಾರನ್ನೂ ಕೇವಲ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಂದು ಕಾಲದಲ್ಲಿ, ಕ್ರಿಸ್ತಯೇಸುವನ್ನು ನಾವು ಹಾಗೆ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಹಾಗೆ ಮಾಡುವುದಿಲ್ಲ.
- Verse 17: ಯಾರಾದರೂ ಯೇಸುಕ್ರಿಸ್ತರೊಡನೆ ಒಂದಾದರೆ ಅವನು ನೂತನ ಸೃಷ್ಟಿಯಾಗುತ್ತಾನೆ. ಹಳೆಯದೆಲ್ಲಾ ಅಳಿದುಹೋಗುತ್ತದೆ. ಹೊಸದಿದೋ, ಜನ್ಮತಳೆದಿದೆ.
- Verse 18: ಇದೆಲ್ಲಾ ಆಗುವುದು ದೇವರಿಂದ. ದೇವರು ಕ್ರಿಸ್ತಯೇಸುವಿನ ಮುಖಾಂತರ ನಮ್ಮನ್ನು ತಮ್ಮೊಡನೆ ಸಂಧಾನಪಡಿಸಿಕೊಂಡಿದ್ದಾರೆ.ಇದಲ್ಲದೆ, ಇತರರನ್ನು ಸಂಧಾನಕ್ಕೆ ತರುವ ಕಾರ್ಯವನ್ನು ನಮಗೆ ವಹಿಸಿದ್ದಾರೆ.
- Verse 19: ಹೌದು, ದೇವರು ಮಾನವರ ಅಪರಾಧಗಳನ್ನು ಲೆಕ್ಕಿಸದೆ, ಕ್ರಿಸ್ತಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಡನೆ ಸಂಧಾನಗೊಳಿಸುತ್ತಿದ್ದಾರೆ. ಈ ಸಂಧಾನದ ಸಂದೇಶವನ್ನು ಸಾರುವ ಸೌಭಾಗ್ಯವನ್ನು ಅವರೇ ನಮಗೆ ಕೊಟ್ಟಿದ್ದಾರೆ.
- Verse 20: ಆದ್ದರಿಂದಲೇ ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆ ನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ.
- Verse 21: ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬಂಧವನ್ನು ಪಡೆಯಲೆಂದೇ ಹೀಗೆ ಮಾಡಿದರು.