పరిశుద్ధ గ్రంథము
ಹೊಸ ಒಡಂಬಡಿಕೆ
ರೋಮನರಿಗೆ
13ನೇ ಅಧ್ಯಾಯ
- Verse 1: ಪ್ರತಿಯೊಬ್ಬನು ತನ್ನ ಮೇಲಿನ ಅಧಿಕಾರಿಗಳಿಗೆ ಅಧೀನನಾಗಿರಬೇಕು. ಅಧಿಕಾರವೆಲ್ಲವೂ ಬರುವುದು ದೇವರಿಂದಲೇ. ಈಗಿರುವ ಅಧಿಕಾರಿಗಳೂ ದೇವರಿಂದಲೇ ನೇಮಕಗೊಂಡವರು.
- Verse 2: ಆದುದರಿಂದ ಅಧಿಕಾರವನ್ನು ವಿರೋಧಿಸುವವರು ದೇವರ ಆ ನೇಮಕವನ್ನೇ ವಿರೋಧಿಸುತ್ತಾರೆ. ಅಂಥವರು ಶಿಕ್ಷೆಗೆ ಗುರಿಯಾಗುತ್ತಾರೆ.
- Verse 3: ಕೆಟ್ಟದ್ದನ್ನು ಮಾಡುವವನೇ ಹೊರತು ಒಳ್ಳೆಯದನ್ನು ಮಾಡುವವನು ಅಧಿಕಾರಿಗೆ ಭಯಪಡಬೇಕಾಗಿಲ್ಲ. ಅಧಿಕಾರಿಯ ಮುಂದೆ ನಿರ್ಭಯನಾಗಿರಲು ನಿನಗೆ ಇಷ್ಟವಿದ್ದರೆ ಒಳ್ಳೆಯದನ್ನೇ ಮಾಡುತ್ತಿರು. ಆಗ ಆತನು ನಿನ್ನನ್ನು ಪ್ರಶಂಶಿಸುವನು.
- Verse 4: ಆತನು ನಿನ್ನ ಹಿತಕ್ಕಾಗಿ ದೇವರಿಂದ ನೇಮಕಗೊಂಡ ದಾಸನಾಗಿದ್ದಾನೆ. ಆದರೆ ನೀನು ಕೆಟ್ಟದ್ದನ್ನು ಮಾಡಿದೆ ಆದರೆ ಭಯಪಡಲೇಬೇಕು. ಏಕೆಂದರೆ, ಆತನ ಕೈಯಲ್ಲಿರುವ ಅಧಿಕಾರದಂಡವು ವ್ಯರ್ಥವಾದುದೇನೂ ಅಲ್ಲ. ದೇವರ ದಾಸನಾಗಿರುವ ಆತನು ಕೆಟ್ಟದ್ದನ್ನು ಮಾಡುವವರಿಗೆ ದೇವರದಂಡನೆಯನ್ನು ವಿಧಿಸುತ್ತಾನೆ.
- Verse 5: ಆದ್ದರಿಂದ ನಿಮ್ಮ ಅಧಿಕಾರಿಗಳಿಗೆ ಅಧೀನರಾಗಿರಿ. ಕೇವಲ ದಂಡನೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅಲ್ಲ, ನಿಮ್ಮ ಮನಸ್ಸಾಕ್ಷಿಯ ಸಲುವಾಗಿ.
- Verse 6: ನೀವು ಕಂದಾಯವನ್ನು ಕಟ್ಟುತ್ತಿರುವುದೂ ಈ ಕಾರಣದಿಂದಲೇ. ಅಧಿಕಾರಿಗಳು ದೇವರ ದಾಸರು. ಅವರು ತಮ್ಮ ಪ್ರಸ್ತುತ ಕಾರ್ಯಗಳನ್ನು ನಿರ್ವಹಿಸುವಾಗ ದೇವರ ಸೇವೆಯನ್ನು ಮಾಡುತ್ತಾರೆ.
- Verse 7: ಆದ್ದರಿಂದ ಸಲ್ಲಿಸಬೇಕಾದುದನ್ನು ಅವರಿಗೆ ಸಲ್ಲಿಸಿರಿ. ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು, ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು, ಯಾರಿಗೆ ವಿಧೇಯತೆಯೋ ಅವರಿಗೆ ವಿಧೇಯತೆಯನ್ನು, ಯಾರಿಗೆ ಗೌರವವೋ ಅವರಿಗೆ ಗೌರವವನ್ನು ಸಲ್ಲಿಸಿರಿ.
- Verse 8: ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ವಿಧವಾದ ಋಣವೂ ನಿಮಗಿರಬಾರದು. ಏಕೆಂದರೆ ಪರರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನು ಪೂರ್ಣವಾಗಿ ನೆರವೇರಿಸಿದವನು.
- Verse 9: “ವ್ಯಭಿಚಾರ ಮಾಡಬೇಡ, ಕೊಲಬೇಡ, ಕಳಬೇಡ, ದುರಾಶೆ ಪಡಬೇಡ,” - ಈ ಮುಂತಾದ ಆಜ್ಞೆಗಳೆಲ್ಲವೂ “ನೀನು ನಿನ್ನನ್ನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನೂ ಪ್ರೀತಿಸು,” ಎಂಬ ಒಂದೇ ಆಜ್ಞೆಯಲ್ಲಿ ಅಡಗಿವೆ.
- Verse 10: ಪ್ರೀತಿಯು ಪರರಿಗೆ ಕೇಡು ಬಗೆಯದು. ಆದಕಾರಣ ಪ್ರೀತಿಯೇ ಧರ್ಮಶಾಸ್ತ್ರದ ಪೂರೈಕೆ.
- Verse 11: ಇದೆಂಥ ಕಾಲವೆಂದು ತಿಳಿದಿರುವ ನೀವು ಇದೆಲ್ಲವನ್ನು ಮಾಡಬೇಕು. ನಿದ್ರೆಯಿಂದ ಎಚ್ಚೆತ್ತುಕೊಳ್ಳುವ ವೇಳೆಯು ಸಮೀಪಿಸಿತು. ನಾವು ಕ್ರಿಸ್ತಯೇಸುವನ್ನು ವಿಶ್ವಾಸಿಸಲು ಆರಂಭಿಸಿದಾಗ ಇದ್ದುದಕ್ಕಿಂತಲೂ ಈಗ ನಮ್ಮ ಉದ್ಧಾರವು ಸಮೀಪವಾಗಿದೆ.
- Verse 12: ಇರುಳು ಬಹುಮಟ್ಟಿಗೆ ಕಳೆಯಿತು. ಹಗಲು ಸಮೀಪಿಸಿತು. ಇನ್ನು ಅಂಧಕಾರಕ್ಕೆ ಅನುಗುಣವಾದ ದುಷ್ಕೃತ್ಯಗಳನ್ನು ತ್ಯಜಿಸಿಬಿಡೋಣ. ಬೆಳಕಿಗೆ ಅನುಗುಣವಾದ ಆಯುಧಗಳನ್ನು ಧರಿಸಿಕೊಳ್ಳೋಣ.
- Verse 13: ದುಂದೌತಣ - ಕುಡಿತಗಳಲ್ಲಾಗಲೀ, ಕಾಮವಿಲಾಸ-ನಿರ್ಲಜ್ಜಾಕೃತ್ಯಗಳಲ್ಲಾಗಲೀ, ಕಲಹ-ಮತ್ಸರಗಳಲ್ಲಾಗಲೀ ಕಾಲಕಳೆಯದೆ ಬೆಳಕಿನಲ್ಲಿ ಬಾಳುವವರಂತೆ ಸಭ್ಯರಾಗಿ ವರ್ತಿಸೋಣ.
- Verse 14: ದೇಹದ ದುರಿಚ್ಛೆಗಳಿಗೆ ಬಲಿಯಾಗದೆ ಕ್ರಿಸ್ತಂಬರರಾಗಿರಿ.