पवित्र बाइबिल
ಹಳೆಯ ಒಡಂಬಡಿಕೆ
ಆದಿಕಾಂಡ
1ನೇ ಅಧ್ಯಾಯ
- Verse 1: ಆದಿಯಲ್ಲಿ ದೇವರು ಪರಲೋಕ - ಭೂಲೋಕವನ್ನು ಸೃಷ್ಟಿಮಾಡಿದರು.
- Verse 2: ಭೂಮಿ ನಿರಾಕಾರವಾಗಿಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕಗ್ಗತ್ತಲು ಕವಿದಿತ್ತು. ದೇವರಾತ್ಮ ಜಲರಾಶಿಯ ಮೇಲೆ ಚಲಿಸುತ್ತಿತ್ತು.
- Verse 3: ಆಗ ದೇವರು, “ಬೆಳಕಾಗಲಿ” ಎನ್ನಲು ಬೆಳಕಾಯಿತು.
- Verse 4: ದೇವರ ಕಣ್ಣಿಗೆ ಅದು ಚೆನ್ನಾಗಿ ಕಂಡಿತು. ಅವರು ಬೆಳಕನ್ನೂ ಕತ್ತಲೆಯನ್ನೂ ಬೇರೆಬೇರೆ ಮಾಡಿ ಬೆಳಕಿಗೆ ಹಗಲೆಂದೂ ಕತ್ತಲೆಗೆ ಇರುಳೆಂದೂ ಹೆಸರಿಟ್ಟರು.
- Verse 5: ಹೀಗೆ ಬೈಗೂ ಬೆಳಗೂ ಆಗಿ ಮೊದಲನೆಯ ದಿನವಾಯಿತು.
- Verse 6: ಬಳಿಕ ದೇವರು, “ಜಲರಾಶಿಯ ನಡುವೆ ವಿಸ್ತಾರವಾದ ಒಂದು ಗುಮ್ಮಟವು ಉಂಟಾಗಲಿ, ಅದು ಕೆಳಗಿನ ನೀರನ್ನೂ ಮೇಲಿನ ನೀರನ್ನೂ ಬೇರೆಬೇರೆ ಮಾಡಲಿ,” ಎಂದರು. ಹಾಗೆಯೇ ಆಯಿತು.
- Verse 7: ಹೀಗೆ ದೇವರು ವಿಸ್ತಾರವಾದ ಗುಮ್ಮಟವೊಂದನ್ನು ಮಾಡಿ ಕೆಳಗಿದ್ದ ನೀರನ್ನು ಮೇಲಿದ್ದ ನೀರಿನಿಂದ ವಿಂಗಡಿಸಿದರು.
- Verse 8: ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟರು. ಹೀಗೆ ಬೈಗೂ ಬೆಳಗೂ ಆಗಿ ಎರಡನೆಯ ದಿನ ಆಯಿತು.
- Verse 9: ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲ್ಲ ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ; ಒಣನೆಲವು ಕಾಣಿಸಿಕೊಳ್ಳಲಿ,” ಎಂದರು. ಹಾಗೆಯೇ ಆಯಿತು.
- Verse 10: ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಾಶಿಗೆ “ಸಮುದ್ರ” ಎಂದೂ ಹೆಸರಿಟ್ಟರು. ದೇವರ ಕಣ್ಣಿಗೆ ಅದೂ ಚೆನ್ನಾಗಿ ಕಂಡಿತು.
- Verse 11: ತರುವಾಯ ದೇವರು, “ಭೂಮಿಯಲ್ಲಿ ಸಸ್ಯಗಳನ್ನೂ - ಎಲ್ಲ ತರದ ದವಸಧಾನ್ಯ, ಹಣ್ಣು ಹಂಪಲು ಇವುಗಳನ್ನು ಬಿಡುವ ಗಿಡಮರಬಳ್ಳಿಗಳನ್ನೂ ಬೆಳೆಯಿಸಲಿ,” ಎಂದರು. ಅದು ಹಾಗೆಯೇ ಆಯಿತು.
- Verse 12: ಭೂಮಿಯಲ್ಲಿ ಸಸ್ಯಗಳು ಬೆಳೆದವು; ಎಲ್ಲ ತರದ ದವಸಧಾನ್ಯಗಳನ್ನೂ ಹಣ್ಣುಹಂಪಲುಗಳನ್ನೂ ಬಿಡುವ ಗಿಡಮರಬಳ್ಳಿಗಳು ಕಾಣಿಸಿಕೊಂಡವು. ದೇವರ ಕಣ್ಣಿಗೆ ಅವು ಚೆನ್ನಾಗಿ ಕಂಡವು.
- Verse 13: ಹೀಗೆ ಬೈಗೂ ಬೆಳಗೂ ಆಗಿ ಮೂರನೆಯ ದಿನವಾಯಿತು.
- Verse 14: ಅದಾದನಂತರ ದೇವರು,“ಹಗಲು ಇರುಳುಗಳನ್ನು ಬೇರೆಬೇರೆ ಮಾಡಲು ಋತುಕಾಲಗಳನ್ನೂ ದಿನಸಂವತ್ಸರಗಳನ್ನೂ ಸೂಚಿಸಲು, ಹಾಗು
- Verse 15: ಭೂಮಿಗೆ ಬೆಳಕನ್ನೀಯಲು, ಆಕಾಶ ದೀಪಗಳು ಉಂಟಾಗಲಿ,” ಎಂದರು. ಹಾಗೆಯೇ ಆಯಿತು.
- Verse 16: ಹಗಲನ್ನಾಳುವುದಕ್ಕೆ ಸೂರ್ಯನನ್ನೂ ಇರುಳನ್ನಾಳುವುದಕ್ಕೆ ಚಂದ್ರನನ್ನೂ, ಹೀಗೆ ಎರಡು ದೀವಿಗೆಗಳನ್ನು ಸೃಷ್ಟಿ ಮಾಡಿದರು. ಅದು ಮಾತ್ರವಲ್ಲ, ನಕ್ಷತ್ರಗಳನ್ನೂ ಅವರು ಸೃಷ್ಟಿಮಾಡಿದರು.
- Verse 17: ಆ ದೀವಿಗೆಗಳನ್ನು ಆಕಾಶದಲ್ಲಿ ಇಟ್ಟು ಭೂಮಿಗೆ ಬೆಳಕನ್ನೀಯುವಂತೆ ಮಾಡಿದರು. ಹಾಗೂ
- Verse 18: ಹಗಲಿರುಳುಗಳನ್ನು ಆಳುವುದಕ್ಕೂ, ಬೆಳಕನ್ನೂ ಕತ್ತಲನ್ನೂ ಬೇರೆಬೇರೆ ಮಾಡುವುದಕ್ಕೂ ಅವುಗಳನ್ನು ನೇಮಿಸಿದರು. ದೇವರ ಕಣ್ಣಿಗೆ ಅದೂ ಚೆನ್ನಾಗಿ ಕಂಡಿತು.
- Verse 19: ಹೀಗೆ ಬೈಗೂ ಬೆಳಗೂ ಆಗಿ ನಾಲ್ಕನೆಯ ದಿನ ಆಯಿತು.
- Verse 20: ಆಮೇಲೆ ದೇವರು, “ಹಲವಾರು ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ, ಭೂಮಿ ಆಕಾಶಗಳ ನಡುವೆ ಪಕ್ಷಿಗಳು ಹಾರಾಡಲಿ,” ಎಂದರು.
- Verse 21: ಈ ಪ್ರಕಾರ ದೇವರು ದೊಡ್ಡ ಜಲಚರಗಳನ್ನೂ ನೀರಿನಲ್ಲಿ ತುಂಬಿರುವ ನಾನಾ ವಿಧವಾದ ಜೀವಜಂತುಗಳನ್ನೂ ರೆಕ್ಕೆಗಳುಳ್ಳ ಸಕಲ ವಿಧವಾದ ಪಕ್ಷಿಗಳನ್ನೂ ಸೃಷ್ಟಿಮಾಡಿದರು. ದೇವರ ದೃಷ್ಟಿಗೆ ಅದೂ ಚೆನ್ನಾಗಿ ಕಂಡಿತು.
- Verse 22: ಅವುಗಳಿಗೆ ದೇವರು, “ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಹೆಚ್ಚಲಿ,” ಎಂದು ಹೇಳಿ ಆಶೀರ್ವದಿಸಿದರು.
- Verse 23: ಹೀಗೆ ಬೈಗೂ ಬೆಳಗೂ ಆಗಿ ಐದನೆಯ ದಿನ ಆಯಿತು.
- Verse 24: ಆ ಬಳಿಕ ದೇವರು, “ಭೂಮಿಯಿಂದ ಎಲ್ಲ ತರದ ಜೀವಜಂತುಗಳು ಸೃಷ್ಟಿಯಾಗಲಿ. ದೊಡ್ಡ - ಚಿಕ್ಕ ಸಾಕುಪ್ರಾಣಿಗಳೂ ಕಾಡುಮೃಗಗಳೂ ಹುಟ್ಟಲಿ,“ ಎಂದರು. ಅಂತೆಯೇ ಆಯಿತು.
- Verse 25: ಎಲ್ಲ ತರದ ದೊಡ್ಡ - ಚಿಕ್ಕ ಕಾಡುಮೃಗಗಳನ್ನೂ ಸಾಕುಪ್ರಾಣಿಗಳನ್ನೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳನ್ನು ದೇವರು ಸೃಷ್ಟಿಮಾಡಿದರು. ಅವರ ನೋಟಕ್ಕೆ ಅದು ಚೆನ್ನಾಗಿ ಕಂಡಿತು.
- Verse 26: ಅದಾದನಂತರ ದೇವರು, “ನಮ್ಮಂತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ - ಚಿಕ್ಕ ಸಾಕುಪ್ರಾಣಿ ಹಾಗು ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ,” ಎಂದರು. ಹೀಗೆ ದೇವರು:
- Verse 27: ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ.
- Verse 28: ಅವರನ್ನು ದೇವರು ಆಶೀರ್ವದಿಸಿ, “ನೀವು ಅಭಿವೃದ್ಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ; ಭೂಮಿಯಲ್ಲಿ ಹರಡಿಕೊಂಡು ಅದನ್ನು ವಶಪಡಿಸಿಕೊಳ್ಳಿರಿ; ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲ ಪ್ರಾಣಿಗಳ ಮೇಲೆಯೂ ದೊರೆತನ ಮಾಡಿರಿ.
- Verse 29: ಇನ್ನೂ, ಭೂಮಿಯಲ್ಲಿರುವ ಎಲ್ಲ ತರದ ದವಸಧಾನ್ಯಗಳನ್ನೂ ಹಣ್ಣುಹಂಪಲುಗಳನ್ನೂ ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ.
- Verse 30: ಇದಲ್ಲದೆ, ಭೂಮಿಯ ಮೇಲೆ ತಿರುಗಾಡುವ ದೊಡ್ಡ - ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳಿಗೂ ಹುಲ್ಲು ಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ,” ಎಂದು ಹೇಳಿದರು. ಹಾಗೆಯೇ ಆಯಿತು.
- Verse 31: ತಾವು ಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು. ಹೀಗೆ ಬೈಗೂ ಬೆಳಗೂ ಆಗಿ ಆರನೆಯ ದಿನ ಆಯಿತು.