ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಅರಸುಗಳು
11ನೇ ಅಧ್ಯಾಯ
- Verse 1: ಅರಸ ಸೊಲೊಮೋನನು ಫರೋಹನ ಮಗಳನ್ನಲ್ಲದೆ, ಮೋವಾಬ್ಯರು, ಅಮ್ಮೋನಿಯರು, ಎದೋಮ್ಯರು, ಚೀದೋನ್ಯರು, ಹಿತ್ತಿಯರು ಎಂಬೀ ಜನಾಂಗಗಳ ಮಹಿಳೆಯರನ್ನೂ ಮೋಹಿಸಿದನು.
- Verse 2: ಸರ್ವೇಶ್ವರ ಈ ಜನಾಂಗಗಳ ವಿಷಯದಲ್ಲಿ ಇಸ್ರಯೇಲರಿಗೆ, “ನಿಮಗೂ ಅವರಿಗೂ ಕೊಟ್ಟುಕೊಳ್ಳುವ ಸಂಬಂಧ ಇರಕೂಡದು; ಹೀಗೆ ವಿವಾಹ ಸಂಬಂಧವಾಗುವುದಾದರೆ ಅವರು ನಿಮ್ಮ ಮನಸ್ಸನ್ನು ತಮ್ಮ ದೇವತೆಗಳ ಕಡೆಗೆ ತಿರುಗಿಸಬಹುದು,” ಎಂದು ಎಚ್ಚರಿಸಿದ್ದರು. ಆದರೂ ಸೊಲೊಮೋನನು ಅವರ ಮಹಿಳೆಯರಲ್ಲಿ ಅನುರಕ್ತನಾಗಿದ್ದನು.
- Verse 3: ಅವನಿಗೆ ರಾಜವಂಶದವರಾದ ಏಳುನೂರು ಮಂದಿ ಪತ್ನಿಯರಲ್ಲದೆ ಮುನ್ನೂರು ಮಂದಿ ಉಪಪತ್ನಿಯರಿದ್ದರು. ಈ ಮಹಿಳೆಯರು ಅವನ ಮನಸ್ಸನ್ನು ಕೆಡಿಸಿಬಿಟ್ಟರು.
- Verse 4: ಅವನು ವೃದ್ಧನಾದಾಗ ಇವರು ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣ ಅವನು ತನ್ನ ದೇವರಾದ ಸರ್ವೇಶ್ವರನಲ್ಲಿಟ್ಟಿದ್ದ ಯಥಾರ್ಥ ಭಕ್ತಿಯನ್ನು ಕಳೆದುಕೊಂಡನು. ತನ್ನ ತಂದೆಯಾದ ದಾವೀದನಂತೆ ನಡೆಯಲಿಲ್ಲ.
- Verse 5: ಸಿದೋನ್ಯರ ಅಷ್ಟೋರೆತ್ ದೇವತೆಯನ್ನೂ ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹವನ್ನೂ ಆರಾಧಿಸತೊಡಗಿದನು.
- Verse 6: ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು; ಅವನ ತಂದೆ ದಾವೀದನು ಪೂರ್ಣಮನಸ್ಸಿನಿಂದ ಸರ್ವೇಶ್ವರನನ್ನು ಸೇವೆಮಾಡಿದಂತೆ ಅವನು ಸೇವೆಮಾಡಲಿಲ್ಲ.
- Verse 7: ಅವನು ಜೆರುಸಲೇಮಿನ ಮೂಡಲಲ್ಲಿರುವ ಗುಡ್ಡದಲ್ಲಿ ಮೋವಾಬ್ಯರ ಕೆಮೋಷ್ ಎಂಬ ಅಸಹ್ಯ ವಿಗ್ರಹಕ್ಕೂ ಪೂಜಾಸ್ಥಳಗಳನ್ನು ಏರ್ಪಡಿಸಿದನು.
- Verse 8: ಈ ಪ್ರಕಾರ ಅನ್ಯಜನಾಂಗಗಳಿಂದ ಬಂದ ತನ್ನ ಹೆಂಡತಿಯರು ತಮ್ಮ ದೇವತೆಗಳಿಗೆ ಧೂಪಾರತಿ ಎತ್ತುವುದಕ್ಕೂ ಬಲಿ ಅರ್ಪಿಸುವುದಕ್ಕೂ ಅನುಕೂಲ ಮಾಡಿಕೊಟ್ಟನು.
- Verse 9: ಸೊಲೊಮೋನನಿಗೆ ಇಸ್ರಯೇಲ್ ದೇವರಾದ ಸರ್ವೇಶ್ವರ ಎರಡು ಸಾರಿ ಕಾಣಿಸಿಕೊಂಡು,
- Verse 10: ಅನ್ಯದೇವತೆಗಳನ್ನು ಪೂಜಿಸಲೇಬಾರದೆಂದು ಆಜ್ಞಾಪಿಸಿದ್ದರೂ ಅವನು ಅವರ ಆಜ್ಞೆಗಳನ್ನು ಮೀರಿದನು.
- Verse 11: ಆದ್ದರಿಂದ ಸರ್ವೇಶ್ವರ ಅವನ ಮೇಲೆ ಕೋಪಗೊಂಡು, “ನೀನು ಹೀಗೆ ಮಾಡಿ ನನ್ನ ನಿಬಂಧನೆಗಳನ್ನು ಮೀರಿದ್ದರಿಂದ ನಿನ್ನ ರಾಜ್ಯವನ್ನು ಕಿತ್ತುಕೊಂಡು ನಿನ್ನ ದಾಸನಿಗೆ ಕೊಡುವೆನು.
- Verse 12: ಆದರೂ ನಾನು ನಿನ್ನ ತಂದೆ ದಾವೀದನನ್ನು ಸ್ಮರಿಸಿ, ನಿನ್ನ ಮಗನ ಕೈಯಿಂದ ಅದನ್ನು ಕಿತ್ತುಕೊಳ್ಳುವೆನು.
- Verse 13: ಆದರೆ ಇಡೀ ಸಾಮ್ರಾಜ್ಯವನ್ನು ಕಿತ್ತುಕೊಳ್ಳುವುದಿಲ್ಲ; ನನ್ನ ದಾಸ ದಾವೀದನ ನಿಮಿತ್ತ ಹಾಗು ನಾನು ಆರಿಸಿಕೊಂಡ ಜೆರುಸಲೇಮ್ ಪಟ್ಟಣದ ನಿಮಿತ್ತ ನಿನ್ನ ಮಗನಿಗೆ ಒಂದು ಕುಲವನ್ನು ಉಳಿಸುವೆನು,” ಎಂದು ಸರ್ವೇಶ್ವರ ಹೇಳಿದರು.
- Verse 14: ಎದೋಮ್ಯನೂ ರಾಜಪುತ್ರನೂ ಆದ ಹದದನನ್ನು ಸೊಲೊಮೋನನಿಗೆ ವಿರುದ್ಧ ದಂಗೆಯೇಳುವಂತೆ ಮಾಡಿದರು ಸರ್ವೇಶ್ವರ.
- Verse 15: ದಾವೀದನಿಗೂ ಎದೋಮ್ಯರಿಗೂ ಯುದ್ಧ ನಡೆಯುತ್ತಿರುವಾಗ ಸೇನಾಪತಿಯಾದ ಯೋವಾಬನು ಇಸ್ರಯೇಲ್ ಸರ್ವಸೈನ್ಯದೊಡನೆ ಅಲ್ಲಿಗೆ ಹೋಗಿ ಹತರಾದ ಇಸ್ರಯೇಲರನ್ನು ಸಮಾಧಿಮಾಡಿದನು.
- Verse 16: ಆರು ತಿಂಗಳು ಅಲ್ಲಿಯೇ ಇದ್ದು ಎದೋಮ್ಯರ ಎಲ್ಲ ಗಂಡಸರನ್ನು ಸಂಹರಿಸಿದನು.
- Verse 17: ಆ ಸಮಯದಲ್ಲಿ ಬಾಲಕನಾದ ಹದದನು ತನ್ನ ತಂದೆಯ ಸೇವಕರಾದ ಕೆಲವು ಮಂದಿ ಎದೋಮ್ಯರ ಜೊತೆಯಲ್ಲಿ ಈಜಿಪ್ಟಿಗೆ ಓಡಿಹೋಗಬೇಕೆಂದು ಹೊರಟನು.
- Verse 18: ಅವರು ಮೊದಲು ಮಿದ್ಯಾನಿಗೂ ಆಮೇಲೆ ಪಾರಾನಿಗೂ ಬಂದರು. ಅಲ್ಲಿಂದ ಕೆಲವುಮಂದಿ ಪಾರಾನಿನ ಜನರನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಈಜಿಪ್ಟಿನ ಅರಸ ಫರೋಹನ ಬಳಿಗೆ ಬಂದರು. ಫರೋಹನು ಹದದನಿಗೆ ಆಹಾರವನ್ನು, ಮನೆಯನ್ನು ಹಾಗು ಭೂಮಿಯನ್ನು ಕೊಟ್ಟನು.
- Verse 19: ಹದದನು ಫರೋಹನ ವಿಶೇಷ ದಯೆಗೆ ಪಾತ್ರನಾದನು. ಫರೋಹನು ತನ್ನ ಹೆಂಡತಿಯೂ ರಾಣಿಯೂ ಆದ ತಖ್ಪೆನೇಸ್ ಎಂಬಾಕೆಯ ತಂಗಿಯನ್ನು ಇವನಿಗೆ ಮದುವೆ ಮಾಡಿಕೊಟ್ಟನು.
- Verse 20: ಆಕೆಯಲ್ಲಿ ಇವನಿಗೆ ಗೆನುಬತ್ ಎಂಬ ಮಗನು ಹುಟ್ಟಿದನು. ತಖ್ಪೆನೇಸಳು ಆ ಹುಡುಗನನ್ನು ಫರೋಹನ ಮನೆಯಲ್ಲೇ ಸಾಕಿದಳು; ಅಲ್ಲಿ ಇವನು ಫರೋಹನ ಕುಮಾರರ ಜೊತೆಯಲ್ಲಿದ್ದನು.
- Verse 21: ದಾವೀದನು ಸತ್ತು ಪಿತೃಗಳ ಬಳಿಗೆ ಸೇರಿದನೆಂದೂ ಸೇನಾಪತಿಯಾದ ಯೋವಾಬನು ಮೃತನಾದನೆಂದೂ ಈಜಿಪ್ಟಿನಲ್ಲಿದ್ದ ಹದದನು ಕೇಳಿದನು. ಫರೋಹನಿಗೆ ಅವನು, “ನಾನು ಸ್ವದೇಶಕ್ಕೆ ಹೋಗಬೇಕೆಂದಿರುತ್ತೇನೆ; ಅಪ್ಪಣೆಕೊಡಿ,” ಎಂದನು.
- Verse 22: ಫರೋಹನು, “ನನ್ನ ಬಳಿಯಲ್ಲಿ ನಿನಗೇನು ಕೊರತೆಯಾಯಿತು? ಸ್ವದೇಶಕ್ಕೆ ಹೋಗಬೇಕೆಂದು ಏಕೆ ಆಶಿಸುತ್ತಿ?” ಎಂದು ಕೇಳಿದನು. ಅವನು, “ಏನೂ ಕೊರತೆಯಾಗಿಲ್ಲ; ಆದರೂ ನನಗೆ ಹೋಗುವುದಕ್ಕೆ ಅಪ್ಪಣೆಯಾಗಬೇಕು,” ಎಂದು ಉತ್ತರಕೊಟ್ಟನು. ಹದದನು ತನ್ನ ಊರಿಗೆ ಮರಳಿದನು.
- Verse 23: ಸೊಲೊಮೋನನಿಗೆ ವಿರುದ್ಧ ದೇವರು ಎಬ್ಬಿಸಿದ ಎರಡನೆಯ ವೈರಿ ಎಲ್ಯಾದಾವನ ಮಗ ರೆಜೋನ್ ಎಂಬವನು.
- Verse 24: ದಾವೀದನು ಚೋಬದವರನ್ನು ಸಂಹರಿಸಿದಾಗ ಈ ರೆಜೋನನು ಚೋಬದ ಅರಸನೂ ತನ್ನ ಒಡೆಯನೂ ಆದ ಹದದೆಜೆರನನ್ನು ಬಿಟ್ಟು ಓಡಿಹೋಗಿ, ಕೆಲವು ಮಂದಿಯನ್ನು ಕೂಡಿಸಿಕೊಂಡು, ತಾನು ಅವರ ನಾಯಕನಾಗಿ, ಅವರೊಡನೆ ದಮಸ್ಕಕ್ಕೆ ಬಂದು ಅಲ್ಲಿ ಅರಸನಾದನು.
- Verse 25: ಸೊಲೊಮೋನನ ಜೀವಮಾನದಲ್ಲೆಲ್ಲಾ ಇಸ್ರಯೇಲರಿಗೆ ಮಹಾಬಾಧಕನಾದ ಹದದನ ಜೊತೆಗೆ ಇವನೂ ವೈರಿಯಾಗಿದ್ದನು. ಇವನು ಸಿರಿಯಾ ದೇಶದಲ್ಲಿ ಅರಸನಾಗಿ ಇಸ್ರಯೇಲರನ್ನು ಬಹಳವಾಗಿ ದ್ವೇಷಿಸಿದನು.
- Verse 26: ಅರಸ ಸೊಲೊಮೋನನಿಗೆ ವಿರುದ್ಧ ದಂಗೆ ಎದ್ದವರಲ್ಲಿ, ಅವನ ಸೇವಕನೂ ಚರೇದ ಊರಿನ ಎಫ್ರಯೀಮ್ಯನಾದ ನೆಬಾಟನ ಮಗನೂ ಆಗಿದ್ದ, ಯಾರೊಬ್ಬಾಮ ಎಂಬವನು ಮತ್ತೊಬ್ಬನು. ಚೆರೂಗಳೆಂಬ ವಿಧವೆ ಅವನ ತಾಯಿ.
- Verse 27: ಅವನು ದಂಗೆಯೆದ್ದ ವಿವರಣೆ ಹೀಗಿದೆ : ಸೊಲೊಮೋನನು ಮಿಲ್ಲೋಕೋಟೆಯನ್ನು ಕಟ್ಟಿಸಿ ತನ್ನ ತಂದೆ ದಾವೀದನ ಪಟ್ಟಣದ ದುರ್ಬಲ ಸ್ಥಳವನ್ನು ಭದ್ರಪಡಿಸುತ್ತಿರುವಾಗ
- Verse 28: ಯೌವನಸ್ಥನಾದ ಯಾರೊಬ್ಬಾಮನು ಬಹುಸಾಮರ್ಥ್ಯದಿಂದ ಕೆಲಸಮಾಡುತ್ತಿರುವುದನ್ನು ಕಂಡು ಅವನನ್ನು ಜೋಸೆಫ್ಯರ ಎಲ್ಲಾ ಆಳುಗಳ ಮೇಲೆ ಮೇಸ್ತ್ರಿಯನ್ನಾಗಿ ನೇಮಿಸಿದನು.
- Verse 29: ಒಂದು ದಿವಸ ಯಾರೊಬ್ಬಾಮನು ಜೆರುಸಲೇಮಿನಿಂದ ಎಲ್ಲಿಗೋ ಹೋಗುತ್ತಿರುವಾಗ ಅಡವಿಯಲ್ಲಿ ಶಿಲೋವಿನವನಾದ ಅಹೀಯನೆಂಬ ಪ್ರವಾದಿ ಅವನಿಗೆ ಎದುರಾದನು. ಇವನು ಹೊಸ ಬಟ್ಟೆಯನ್ನು ಹೊದ್ದುಕೊಂಡಿದ್ದನು. ಅಲ್ಲಿ ಇವರಿಬ್ಬರ ಹೊರತಾಗಿ ಬೇರೆ ಯಾರೂ ಇರಲಿಲ್ಲ.
- Verse 30: ಆಗ ಅಹೀಯನು, ತಾನು ಹೊದ್ದುಕೊಂಡಿದ್ದ ಹೊಸ ಬಟ್ಟೆಯನ್ನು ತೆಗೆದುಕೊಂಡು, ಅದನ್ನು ಹರಿದು ಹನ್ನೆರಡು ತುಂಡುಮಾಡಿ,
- Verse 31: ಯಾರೊಬ್ಬಾಮನಿಗೆ, “ನೀನು ಇವುಗಳಲ್ಲಿ ಹತ್ತು ತುಂಡುಗಳನ್ನು ತೆಗೆದುಕೋ. ಇಸ್ರಯೇಲ್ ದೇವರಾದ ಸರ್ವೆಶ್ವರ ರಾಜ್ಯವನ್ನು ಸೊಲೊಮೋನನಿಂದ ಕಿತ್ತುಕೊಂಡು
- Verse 32: ತನ್ನ ದಾಸ ದಾವೀದನ ನಿಮಿತ್ತ ಹಾಗು ತಾವು ಇಸ್ರಯೇಲರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಜೆರುಸಲೇಮ್ ಪಟ್ಟಣದ ನಿಮಿತ್ತ ಅವನಿಗೆ ಒಂದೇ ಒಂದು ಕುಲವನ್ನು ಉಳಿಸಿ, ಬೇರೆ ಹತ್ತು ಕುಲಗಳನ್ನು ನಿನಗೆ ಕೊಡುತ್ತೇನೆಂದು ಹೇಳಿದ್ದಾರೆ.
- Verse 33: ಇದಲ್ಲದೆ, ಅವರು ನಿನಗೆ, ‘ಸೊಲೊಮೋನನೂ ಅವನ ಮನೆಯವರೂ ನನ್ನನ್ನು ಬಿಟ್ಟು ಸಿದೋನ್ಯರ ದೇವತೆಯಾದ ಅಷ್ಟೋರೆತ್, ಮೋವಾಬ್ಯರ ದೇವತೆಯಾದ ಕೆಮೋಷ್, ಅಮ್ಮೋನಿಯರ ದೇವತೆಯಾದ ಮಿಲ್ಕೋಮ್ ಇವುಗಳನ್ನು ಆರಾಧಿಸುತ್ತಿದ್ದಾರೆ. ಅವರ ತಂದೆ ದಾವೀದನು ನನ್ನ ನಿಯಮವಿಧಿಗಳನ್ನು ಕೈಕೊಂಡು ನನ್ನನ್ನು ಮೆಚ್ಚಿಸಿ ನಡೆದಂತೆ ಅವರು ನಡೆಯದೆಹೋದದ್ದೂ ಇದಕ್ಕೆ ಕಾರಣ.
- Verse 34: ಆದರೂ ನಾನು ಸೊಲೊಮೋನನಿಂದ ಸಾಮ್ರಾಜ್ಯವನ್ನೆಲ್ಲಾ ಕಿತ್ತುಕೊಳ್ಳುವುದಿಲ್ಲ; ನನ್ನ ಆಜ್ಞಾವಿಧಿಗಳನ್ನು ಕೈಕೊಂಡವನೂ ನಾನು ಆರಿಸಿಕೊಂಡ ದಾಸನೂ ಆದ ದಾವೀದನ ನಿಮಿತ್ತ ಅವನನ್ನು ಅವನ ಜೀವಮಾನದಲ್ಲೆಲ್ಲಾ ಅರಸನನ್ನಾಗಿಯೇ ಇರಿಸುವೆನು.
- Verse 35: ಆದರೆ, ಅವನ ಮಗನ ಕೈಯಿಂದ ಅದನ್ನು ಕಿತ್ತುಕೊಂಡು ನಿನಗೆ ಹತ್ತು ಕುಲಗಳನ್ನು ಕೊಡುವೆನು.
- Verse 36: ನಾನು ನನ್ನ ಹೆಸರಿಗಾಗಿ ಆರಿಸಿಕೊಂಡ ಜೆರುಸಲೇಮ್ ಪಟ್ಟಣದಲ್ಲಿ ನನ್ನ ದಾಸ ದಾವೀದನ ದೀಪ ನನ್ನ ಸನ್ನಿಧಿಯಲ್ಲಿ ಉರಿಯುತ್ತಲೇ ಇರುವಂತೆ ಅವನ ಮಗನಿಗೆ ಒಂದು ಕುಲವನ್ನು ಉಳಿಸುವೆನು.
- Verse 37: ನಾನು ನಿನ್ನನ್ನು ಇಸ್ರಯೇಲರ ಅರಸನನ್ನಾಗಿ ನೇಮಿಸುವೆನು; ನೀನು ಅವರನ್ನು ಇಷ್ಟದ ಪ್ರಕಾರ ಆಳಬಹುದು.
- Verse 38: ನನ್ನ ದಾಸ ದಾವೀದನು ನನ್ನ ಆಜ್ಞಾವಿಧಿಗಳನ್ನು ಕೈಕೊಂಡಂತೆ, ನೀನೂ ನನ್ನ ಆಜ್ಞೆಗಳನ್ನು ಕೈಗೊಂಡು, ನನ್ನ ಮಾರ್ಗದಲ್ಲಿ ನಡೆದು ನನ್ನನ್ನು ಮೆಚ್ಚಿಸಿದರೆ, ನಾನು ನಿನ್ನ ಸಂಗಡ ಇದ್ದು ದಾವೀದನ ಸಂತಾನದಂತೆ ನಿನ್ನ ಸಂತಾನವನ್ನೂ ಸ್ಥಿರಪಡಿಸುವೆನು; ಇಸ್ರಯೇಲ್ ರಾಜ್ಯ ನಿನ್ನ ಪಾಲಾಗುವುದು.
- Verse 39: ದಾವೀದನ ಸಂತಾನದವರನ್ನು ಅವರ ಪಾಪದ ನಿಮಿತ್ತ ತಲೆ ತಗ್ಗಿಸುವಂತೆ ಮಾಡುವೆನು. ಆದರೆ ಸದಾಕಾಲಕ್ಕೂ ಅಲ್ಲ, ಎಂದು ಹೇಳಿದ್ದಾರೆ,” ಎಂದನು.
- Verse 40: ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿದಾಗ ಅವನು ತಪ್ಪಿಸಿಕೊಂಡು, ಈಜಿಪ್ಟಿನ ಅರಸ ಶೀಶಕನ ಬಳಿಗೆ ಹೋಗಿ, ಸೊಲೊಮೋನನು ಜೀವದಿಂದಿರುವವರೆಗೆ ಅಲ್ಲಿಯೇ ಇದ್ದನು.
- Verse 41: ಸೊಲೊಮೋನನ ಉಳಿದ ಸಾಧನೆಗಳನ್ನು ಹಾಗು ಅವನ ಜ್ಞಾನವನ್ನು ಕುರಿತು ‘ಸೊಲೊಮೋನನ ಚರಿತ್ರೆ’ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.
- Verse 42: ಅವನು ಜೆರುಸಲೇಮಿನಲ್ಲಿದ್ದುಕೊಂಡು, ಎಲ್ಲಾ ಇಸ್ರಯೇಲರನ್ನು ನಾಲ್ವತ್ತು ವರ್ಷ ಆಳಿ, ನಿಧನನಾಗಿ, ಪಿತೃಗಳ ಬಳಿಗೆ ಸೇರಿದನು.
- Verse 43: ಅವನ ಶವವನ್ನು ತಂದೆಯಾದ ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ರೆಹಬ್ಬಾಮನು ಅರಸನಾದನು.