ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
16ನೇ ಅಧ್ಯಾಯ
- Verse 1: ಆಗ ಯೋಬನು ಕೊಟ್ಟ ಉತ್ತರ:
- Verse 2: “ಇಂಥ ಎಷ್ಟೋ ಮಾತುಗಳನ್ನು ಕೇಳಿದ್ದೇನೆ ನೀವೆಲ್ಲರು ಆದರಿಸುವವರಲ್ಲ, ಬಾಧಿಸುವವರೇ.
- Verse 3: ನಿಮ್ಮ ಗಾಳಿಮಾತುಗಳಿಗೆ ಇತಿಮಿತಿ ಬೇಡವೇನು? ಇಂಥ ಉತ್ತರ ಕೊಡಲು ನಿಮ್ಮನ್ನು ಒತ್ತಾಯಪಡಿಸಿದ್ದೇನು?
- Verse 4: ನನ್ನ ಸ್ಥಿತಿಯಲ್ಲಿ ನೀವಿದ್ದಿದ್ದರೆ ನಾನೂ ಮಾತಾಡಬಹುದಿತ್ತು ನಿಮ್ಮಂತೆ. ನಿಮಗೆ ವಿರುದ್ಧ ನಾನೂ ಮಾತೂ ಬೆಳೆಸಬಹುದಿತ್ತು ನಿಮ್ಮ ವಿಷಯದಲ್ಲಿ ನಾನೂ ತಲೆಯಾಡಿಸಬಹುದಿತ್ತು.
- Verse 5: ನಾನು ನಿಮಗೆ ಬಾಯಿಮಾತಿನಿಂದ ಧೈರ್ಯ ಹೇಳಬಹುದಿತ್ತು ತುಟಿಮಾತುಗಳಿಂದ ಆದರಿಸಿ ಸಾಂತ್ವನ ನೀಡಬಹುದಿತ್ತು.
- Verse 6: ನಾನು ಮಾತಾಡಿದರೆ ನನ್ನ ನೋವು ನಿವಾರಣೆಯಾಗದು ನಾನು ಸುಮ್ಮನಿದ್ದರೆ ನನ್ನ ಕಷ್ಟ ಪರಿಹಾರವಾಗದು.
- Verse 7: ದೇವರೇ, ದುಃಖದಿಂದ ನೀ ನನ್ನನ್ನು ಸವೆಸಿರುವೆ ನನ್ನ ಬಂಧುಬಳಗದವರನ್ನು ಸದೆಬಡಿದಿರುವೆ.
- Verse 8: ನನ್ನ ಮುಖವೆಲ್ಲ ಸುಕ್ಕುಹಿಡಿದಿದೆ ನನ್ನ ಸಣಕಲುತನವೆ ನನಗೆ ವಿರುದ್ಧ ಸಾಕ್ಷಿಯಾಗಿದೆ.
- Verse 9: ದೇವರ ಸಿಟ್ಟು ಸೀಳಿ ಹಾಳುಮಾಡುತ್ತಿದೆ ಆತ ನನ್ನನ್ನು ನೋಡಿ ಹಲ್ಲುಕಡಿದಿದ್ದಾನೆ ನನ್ನ ವೈರಿ ನನ್ನನ್ನು ದುರುಗುಟ್ಟಿ ನೋಡುತ್ತಿದ್ದಾನೆ.
- Verse 10: ಜನರು ಬಾಯಿಕಿಸಿದು ನನ್ನನು ಅಣಕಿಸುತ್ತಾರೆ ಛೀಮಾರಿ ಹಾಕಿ ನನ್ನ ದವಡೆಗೆ ಬಡಿದಿದ್ದಾರೆ ನನಗೆ ವಿರುದ್ಧವಾಗಿ ಗುಂಪುಕಟ್ಟಿದ್ದಾರೆ.
- Verse 11: ದೇವರು ನನ್ನನ್ನೊಪ್ಪಿಸಿಬಿಟ್ಟಿದ್ದಾನೆ ತುಂಟರಿಗೆ ನನ್ನನ್ನು ಎಸೆದುಬಿಟ್ಟಿದ್ದಾನೆ ದುಷ್ಟರ ಕೈಗೆ.
- Verse 12: ನೆಮ್ಮದಿಯಾಗಿದ್ದ ನನ್ನನು ಒಡೆದು ಬಡಿದುಹಾಕಿದ್ದಾನೆ ಕುತ್ತಿಗೆ ಹಿಸುಕಿ ನನ್ನನು ತುಂಡಾಗಿಸಿದ್ದಾನೆ. ಬಾಣಬಿಡಲು ನನ್ನನು ಗುರಿಹಲಗೆಯಾಗಿಸಿಕೊಂಡಿದ್ದಾನೆ.
- Verse 13: ಮುತ್ತಿಕೊಂಡಿವೆ ನನ್ನನು ಆತನ ಬಾಣಗಳು ನಿರ್ದಯೆಯಿಂದ ಅಂತರಂಗವನ್ನು ಇರಿಯುತ್ತಿಹನು ನೆಲದ ಮೇಲೆ ನನ್ನ ಪಿತ್ತವನು ಸುರಿಸುತ್ತಿಹನು.
- Verse 14: ಪೆಟ್ಟಿನ ಮೇಲೆ ಪೆಟ್ಟು ಕೊಟ್ಟು ನನ್ನನು ಬಡಕಲಾಗಿಸಿಹನು ಯುದ್ಧಶೂರನಂತೆ ಓಡಿಬಂದು ಮೇಲೆ ಬೀಳುತ್ತಿಹನು.
- Verse 15: ಗೋಣಿತಟ್ಟನ್ನು ಹೊಲಿದು ಮೈಗೆ ಹಾಕಿಕೊಂಡಿರುವೆ ನನ್ನ ಕೊಂಬನ್ನು ಬೂದಿಯೊಳಗೆ ಬಾಗಿಸಿಟ್ಟಿರುವೆ.
- Verse 16: ಕಣ್ಣೀರು ಸುರಿಸಿ ನನ್ನ ಮುಖ ಕೆಂಪೇರಿದೆ ನನ್ನ ಕಣ್ಣುಗಳಿಗೆ ಕಾರಿರುಳು ಕವಿದಿದೆ.
- Verse 17: ಆದರೂ ನಾನು ಹಿಂಸಾಚಾರಕ್ಕೆ ಕೈಹಾಕಲಿಲ್ಲ ನಾನು ಮಾಡುವ ಪ್ರಾರ್ಥನೆ ನಿರ್ಮಲ.
- Verse 18: ಪೊಡವಿಯೇ, ನನ್ನ ನೆತ್ತರನ್ನು ನೀ ಮುಚ್ಚಬೇಡ ನಾನು ಮಾಡುತ್ತಿರುವ ಮೊರೆಯನ್ನು ನಿಲ್ಲಿಸಬೇಡ.
- Verse 19: ಇಗೋ, ನನ್ನ ಕಡೆಯ ಸಾಕ್ಷಿ ಸ್ವರ್ಗದಲ್ಲಿರುವನು ನನ್ನ ಪರವಾದಿ ಮೇಲಣ ಲೋಕದಲ್ಲಿರುವನು.
- Verse 20: ಗೆಳೆಯರು ನನ್ನನ್ನು ಹೀಗಳೆಯುತ್ತಿರುವರು ನಾನೋ ಸುರಿಸುತ್ತಿರುವೆ ದೇವರ ಮುಂದೆ ಕಣ್ಣೀರು.
- Verse 21: ಇದು ನನಗೆ ನ್ಯಾಯ ದೊರಕಿಸಲಿ, ದೇವರ ಮುಂದೆ ತನ್ನ ಮಿತ್ರನಿಗಾಗಿ ಒಬ್ಬನು ವಾದಿಸುವಂತೆ.
- Verse 22: ನನ್ನ ವರ್ಷಗಳು ಕಳೆದುಹೋಗುತ್ತಿವೆ ಹಿಂತಿರುಗಲಾಗದ ಹಾದಿಯನು ನಾನು ಹಿಡಿಯಲಿರುವೆ.