ಗಾಯಕರ ಮಂಡಳಿಯಿಂದ ಕಂಚಿನ ತಾಳಗಳನ್ನು ಬಾರಿಸಲು ಆಯ್ಕೆಹೊಂದಿದವರು: ಯೋವೇಲನ ಮಗ ಹೇಮಾನ್, ಅವನ ಬಂಧು ಬೆರೆಕ್ಯನ ಮಗ ಆಸಾಫ್, ಮೆರಾರೀ ಕುಟುಂಬಕ್ಕೆ ಸೇರಿದ ಕೂಷಾಯನ ಮಗ ಏತಾನ್ ಎಂಬವರು. ತಮಗೆ ಸಹಾಯ ಮಾಡಲು ತಾರಸ್ಥಾಯಿಯ ತಂತಿವಾದ್ಯಗಳನ್ನು ಬಾರಿಸಲು ಜೆಕರ್ಯ, ಬೇನ್, ಯಾಜೀಯೇಲ್, ಶಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ ಹಾಗು ಮಸೇಯ ಎಂಬವರನ್ನು ಆರಿಸಿಕೊಂಡರು. ಮಂದ್ರಸ್ಥಾಯಿಯ ಕಿನ್ನರಿಗಳನ್ನು ಬಾರಿಸಲು ಮತಿತ್ಯ, ಎಲೀಫೆಲೇಹು, ಮಿಕ್ನೇಯ, ದೇವಾಲಯದ ದ್ವಾರಪಾಲಕರಾದ ಓಬೇದೆದೋಮ್ ಮತ್ತು ಯೆಗೀಯೇಲರನ್ನೂ ನೇಮಿಸಿಕೊಂಡರು.
Go to Home Page