ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ವಿಮೋಚನಕಾಂಡ
38ನೇ ಅಧ್ಯಾಯ
- Verse 1: ಅವನು ಬಲಿಪೀಠವನ್ನು ಜಾಲಿಮರದಿಂದ ಮಾಡಿದನು. ಅದು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರ ಮೂರು ಮೊಳವಾಗಿತ್ತು.
- Verse 2: ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬೆಗಳನ್ನು ಮಾಡಿದನು; ಅವು ಬಲಿಪೀಠದ ಅಂಗಾಂಗಗಳಾಗಿದ್ದವು. ಆ ಪೀಠಕ್ಕೆ ತಾಮ್ರದ ತಗಡುಗಳನ್ನು ಹೊದಿಸಿದನು.
- Verse 3: ಪೀಠದ ಉಪಕರಣಗಳನ್ನೆಲ್ಲಾ ಅಂದರೆ ಅದರ ಬಟ್ಟಲುಗಳು, ಸಲಿಕೆಗಳು, ಬೋಗುಣಿಗಳು, ಮುಳ್ಳುಗಳು, ಅಗ್ಗಿಷ್ಟಿಕೆಗಳು ಇವುಗಳನ್ನೆಲ್ಲಾ ತಾಮ್ರದಿಂದ ಮಾಡಿದನು.
- Verse 4: ಪೀಠದ ಹೆಣಿಗೇ ಕೆಲಸದಿಂದ ತಾಮ್ರದ ಜಾಳಿಗೆಯನ್ನು ಮಾಡಿದನು. ಅದು ಪೀಠದ ಸುತ್ತಲಿರುವ ಕಟ್ಟೆಯ ಕೆಳಗೆ ಪೀಠದ ಬುಡದಿಂದ ನಡುವಿನ ತನಕ ಇರುವಂತೆ ಹಾಕಿದನು.
- Verse 5: ಪೀಠವನ್ನು ಎತ್ತುವ ಗದ್ದಿಗೆಗಳನ್ನು ಸೇರಿಸುವುದಕ್ಕಾಗಿ ತಾಮ್ರದ ಜಾಳಿಗೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಳೆಗಳನ್ನು ಎರಕಹೊಯಿದನು.
- Verse 6: ಪೀಠವನ್ನು ಹೊರುವ ಗದ್ದಿಗೆಗಳನ್ನು ಜಾಲಿಮರದಿಂದ ಮಾಡಿ ತಾಮ್ರದ ತಗಡುಗಳನ್ನು ಹೊದಿಸಿ
- Verse 7: ಅದರ ಎರಡು ಪಕ್ಕಗಳಲ್ಲಿರುವ ಬಳೆಗಳಲ್ಲಿ ಸೇರಿಸಿದನು. ಆ ಪೀಠವನ್ನು ಹಲಗೆಗಳಿಂದ ಪೆಟ್ಟಿಗೆಯಂತೆ ಮಾಡಿದನು.
- Verse 8: ದೇವದರ್ಶನದ ಗುಡಾರದ ಬಾಗಿಲಲ್ಲಿ ಸೇವೆಮಾಡುತ್ತಿದ್ದ ಮಹಿಳೆಯರು ಕೊಟ್ಟ ತಾಮ್ರದ ದರ್ಪಣಗಳಿಂದ ನೀರಿನ ತೊಟ್ಟಿಯನ್ನೂ ಅದರ ಪೀಠವನ್ನೂ ಮಾಡಿದನು.
- Verse 9: ಗುಡಾರಕ್ಕೆ ಅಂಗಳವನ್ನೂ ಮಾಡಿದನು. ಆ ಅಂಗಳದ ದಕ್ಷಿಣದ ಕಡೆಯಲ್ಲಿ ಇದ್ದ ತೆರೆಗಳನ್ನು ಹುರಿನಾರಿನ ಬಟ್ಟೆಯಿಂದ ಮಾಡಲಾಗಿತ್ತು. ಅವು ನೂರು ಮೊಳ ಉದ್ದವಾಗಿದ್ದವು.
- Verse 10: ಆ ಕಡೆಯಲ್ಲಿ ಇಪ್ಪತ್ತು ಕಂಬಗಳೂ ಅವುಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು.
- Verse 11: ಉತ್ತರ ಕಡೆಯಲ್ಲಿಯೂ ನೂರು ಮೊಳ ಉದ್ದವಾದ ತೆರೆಗಳೂ ಇಪ್ಪತ್ತು ಕಂಬಗಳೂ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು.
- Verse 12: ಪಶ್ಚಿಮ ಕಡೆಯಲ್ಲಿ ಐವತ್ತು ಮೊಳ ಉದ್ದವಾದ ತೆರೆಗಳೂ ಹತ್ತು ಕಂಬಗಳೂ ಹತ್ತು ಗದ್ದಿಗೇಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು
- Verse 13: ಪೂರ್ವದಿಕ್ಕಿನಲ್ಲಿಯೂ ಅಂಗಳದ ಅಗಲವು ಐವತ್ತು ಮೊಳವಾಗಿತ್ತು.
- Verse 14: ಅಲ್ಲಿ ಬಾಗಿಲಿನ ಎರಡು ಕಡೆಗಳಲ್ಲಿಯೂ ಹದಿನೈದು ಮೊಳ ಉದ್ದವಾದ ತೆರೆಗಳೂ ಅವುಗಳಿಗೆ ಮೂರು ಮೂರು ಗದ್ದಿಗೇಕಲ್ಲುಗಳೂ ಇದ್ದವು.
- Verse 15: ಅಲ್ಲಿ ಬಾಗಿಲಿನ ಎರಡು ಕಡೆಗಳಲ್ಲಿಯೂ ಹದಿನೈದು ಮೊಳ ಉದ್ದವಾದ ತೆರೆಗಳೂ ಅವುಗಳಿಗೆ ಮೂರು ಮೂರು ಗದ್ದಿಗೇಕಲ್ಲುಗಳೂ ಇದ್ದವು.
- Verse 16: ಅಂಗಳದ ಸುತ್ತಲಿರುವ ತೆರೆಗಳೆಲ್ಲಾ ಹುರಿನಾರಿನ ಬಟ್ಟೆಯಿಂದಲೇ ಮಾಡಲಾಗಿತ್ತು.
- Verse 17: ಕಂಬಗಳ ಗದ್ದಿಗೇಕಲ್ಲುಗಳು ತಾಮ್ರದವುಗಳು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು; ಅವುಗಳ ಬೋದಿಗೆಗಳು ಬೆಳ್ಳಿಯ ತಗಡುಗಳಿಂದ ಮಾಡಲ್ಪಟ್ಟವು. ಅಂಗಳದ ಎಲ್ಲಾ ಕಂಬಗಳಿಗೂ ಬೆಳ್ಳಿಯ ಕಟ್ಟುಗಳಿದ್ದವು.
- Verse 18: ಅಂಗಳದ ಬಾಗಲಲ್ಲಿದ್ದ ಪರದೆಯು ಹುರಿನಾರಿನ ಬಟ್ಟೆಯಿಂದಲೂ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಕಸೂತಿ ಕೆಲಸದವರ ಕೈಯಿಂದ ಮಾಡಲ್ಪಟ್ಟಿತು. ಅದರ ಉದ್ದ ಇಪ್ಪತ್ತು ಮೊಳವಾಗಿತ್ತು; ಅದರ ಅಗಲ ಅಂಗಳದ ಮಿಕ್ಕ ತೆರೆಗಳಂತೆ ಐದು ಮೊಳ.
- Verse 19: ಬಾಗಿಲಿಗೆ ನಾಲ್ಕು ಕಂಬಗಳೂ ನಾಲ್ಕು ತಾಮ್ರದ ಗದ್ದಿಗೇಕಲ್ಲುಗಳೂ ಇದ್ದವು. ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೋದಿಗೆಗಳಿಗೆ ಹೊದಿಸಲ್ಪಟ್ಟ ತಗಡುಗಳೂ ಬೆಳ್ಳಿಯವು.
- Verse 20: ಗುಡಾರದ ಗೂಟಗಳೂ ಅಂಗಳದ ಗೂಟಗಳೂ ಎಲ್ಲಾ ತಾಮ್ರದವುಗಳು.
- Verse 21: ದೇವದರ್ಶನದ ಗುಡಾರವನ್ನು ನಿರ್ಮಿಸಿದಾಗ ಉಪಯೋಗಿಸಿದ ಲೋಹಗಳ ಲೆಕ್ಕ ಮೋಶೆಯ ಆಜ್ಞೆಯ ಮೇರೆಗೆ ಮಹಾಯಾಜಕನಾದ ಆರೋನನ ಮಗ ಈತಾಮಾರನು ಲೇವಿಯರ ಕೈಯಿಂದ ಮಾಡಿಸಿದ ಪಟ್ಟಿ:
- Verse 22: ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದವನು ಯೆಹೂದ ಕುಲದ ಹೂರನ ಮೊಮ್ಮಗನೂ ಊರಿಯ ಮಗನೂ ಆಗಿದ್ದ ಬೆಚಲೇಲನು.
- Verse 23: ಅವನ ಜೊತೆಯಲ್ಲಿ ದಾನ್ ಕುಲದ ಅಹೀಸಾಮಾಕನ ಮಗನಾದ ಒಹೋಲೀಯಾಬನು ಸೇರಿದ್ದನು. ಇವನು ಶಿಲ್ಪಕಲೆ ಬಲ್ಲವನು. ಕಲಾತ್ಮಕ ಕೆಲಸವನ್ನು ನಿಯೋಜಿಸುವವನು ಮತ್ತು ನಾರಿನ ಬಟ್ಟೆಯಲ್ಲಿ ನೀಲಿ, ಊದ ಹಾಗು ಕಡುಗೆಂಪುವರ್ಣಗಳುಳ್ಳ ನೂಲಿನಿಂದ ಕಸೂತಿ ಕೆಲಸಮಾಡುವವನು.
- Verse 24: ದೇವಮಂದಿರದ ವಿವಿಧ ಕೆಲಸದಲ್ಲಿ ಉಪಯೋಗಿಸಿದ ಕಾಣಿಕೆಯ ಬಂಗಾರದ ತೂಕ ದೇವರ ಸೇವೆಗೆ ನೇಮಕವಾದ ತೂಕದ ಮೇರೆಗೆ ಸುಮಾರು ಒಂದು ಸಾವಿರ ಕಿಲೋಗ್ರಾಂ ಇತ್ತು.
- Verse 25: ಬೆಳ್ಳಿಯ ತೂಕ ಸುಮಾರು 3,430 ಕಿಲೋಗ್ರಾಂ ಇತ್ತು. ಇದು ಜನಗಣತಿಯಲ್ಲಿ ಸೇರಿಸಲಾಗಿದ್ದ ಇಪ್ಪತ್ತು ವರ್ಷದವರು ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನವರು ದೇವರ ಸೇವೆಗೆ ನೇಮಕವಾದ ನಾಣ್ಯದ ಮೇರೆಗೆ ಕೊಟ್ಟ ಮೊತ್ತ. ಆರುಲಕ್ಷ, ಮೂರು ಸಾವಿರದ ಐನೂರ ಐವತ್ತು ಮಂದಿಯನ್ನು ಜನಗಣತಿಯಲ್ಲಿ ಹೀಗೆ ಸೇರಿಸಲಾಗಿತ್ತು.
- Verse 26: ಬೆಳ್ಳಿಯ ತೂಕ ಸುಮಾರು 3,430 ಕಿಲೋಗ್ರಾಂ ಇತ್ತು. ಇದು ಜನಗಣತಿಯಲ್ಲಿ ಸೇರಿಸಲಾಗಿದ್ದ ಇಪ್ಪತ್ತು ವರ್ಷದವರು ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನವರು ದೇವರ ಸೇವೆಗೆ ನೇಮಕವಾದ ನಾಣ್ಯದ ಮೇರೆಗೆ ಕೊಟ್ಟ ಮೊತ್ತ. ಆರುಲಕ್ಷ, ಮೂರು ಸಾವಿರದ ಐನೂರ ಐವತ್ತು ಮಂದಿಯನ್ನು ಜನಗಣತಿಯಲ್ಲಿ ಹೀಗೆ ಸೇರಿಸಲಾಗಿತ್ತು.
- Verse 27: ಈ ಬೆಳ್ಳಿಯಲ್ಲಿ 3,400 ಕಿಲೋಗ್ರಾಂನ್ನು ದೇವಮಂದಿರದ ನೂರು ಗದ್ದಿಗೇಕಲ್ಲುಗಳನ್ನು ಹಾಗು ತೆರೆಯ ಕಂಬಗಳ ಗದ್ದಿಗೇಕಲ್ಲುಗಳನ್ನು ಎರಕ ಹೊಯ್ಯಲು ಉಪಯೋಗಿಸಲಾಗಿತ್ತು. ಒಂದೊಂದು ಗದ್ದಿಗೆಗೆ 34 ಕಿಲೋಗ್ರಾಂನ್ನು ಉಪಯೋಗಿಸಲಾಗಿತ್ತು.
- Verse 28: ಮಿಕ್ಕ 34 ಕಿಲೋಗ್ರಾಂನಿಂದ ಕಂಬಗಳಿಗೆ ಕೊಂಡಿಗಳನ್ನು ಹಾಗು ಕಟ್ಟುಗಳನ್ನು ಮಾಡಿ ಅವುಗಳ ಬೋದಿಗೆಗಳಿಗೆ ತಗಡುಗಳನ್ನು ಹೊದಿಸಿದ್ದರು.
- Verse 29: ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಮೊತ್ತ 2,425 ಕಿಲೋಗ್ರಾಂ.
- Verse 30: ಇದರಿಂದ ದೇವದರ್ಶನದ ಗುಡಾರದ ಬಾಗಿಲಿಗೆ ಗದ್ದಿಗೇಕಲ್ಲುಗಳನ್ನು, ತಾಮ್ರದ ಬಲಿಪೀಠವನ್ನು, ಅದರ ತಾಮ್ರದ ಜಾಳಿಗೆಯನ್ನು, ಬಲಿಪೀಠದ ಎಲ್ಲ ಉಪಕರಣಗಳನ್ನು
- Verse 31: ಅಂಗಳದ ಸುತ್ತಲಿನ ಗದ್ದಿಗೇಕಲ್ಲುಗಳನ್ನು, ಗುಡಾರದ ಮತ್ತು ಅಂಗಳದ ಎಲ್ಲಾ ಗೂಟಗಳನ್ನು ಮಾಡಿದನು.