ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಆದಿಕಾಂಡ
25ನೇ ಅಧ್ಯಾಯ
- Verse 1: ಅಬ್ರಹಾಮನು ಕೆಟೂರಳೆಂಬ ಇನ್ನೊಬ್ಬ ಹೆಂಡತಿಯನ್ನು ಮದುವೆ ಮಾಡಿಕೊಂಡನು.
- Verse 2: ಆಕೆ ಅವನಿಗೆ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು.
- Verse 3: ಯೊಕ್ಷಾನನು ಶೆಬಾ, ದೆದಾನ್ ಎಂಬವರನ್ನು ಪಡೆದನು. ಅಶ್ಯೂರ್ಯರು, ಲೆಟೂಶ್ಯರೂ ಲೆಯುಮ್ಯರು ದೆದಾನನಿಂದ ಹುಟ್ಟಿದರು.
- Verse 4: ಗೇಫಾ, ಗೇಫೆರ್, ಹನೋಕ್ ಅಬೀದಾ, ಎಲ್ದಾಗ ಎಂಬವರು ಮಿದ್ಯಾನನಿಂದ ಹುಟ್ಟಿದರು. ಇವರೆಲ್ಲರು ಕೆಟೂರಳ ಸಂತತಿಯವರು.
- Verse 5: ಅಬ್ರಹಾಮನು ತನಗಿದ್ದ ಆಸ್ತಿಪಾಸ್ತಿಯನ್ನೆಲ್ಲ ಇಸಾಕನಿಗೆ ಕೊಟ್ಟನು.
- Verse 6: ತನ್ನ ಉಪಪತ್ನಿಯರ ಮಕ್ಕಳಿಗೆ ಕೆಲವು ಸೊತ್ತುಗಳನ್ನು ದಾನಮಾಡಿ ತಾನು ಇನ್ನೂ ಜೀವದಿಂದಿರುವಾಗಲೇ ಅವರನ್ನು ತನ್ನ ಮಗ ಇಸಾಕನ ಬಳಿಯಿಂದ ದೂರಕ್ಕೆ ಪೂರ್ವದಿಕ್ಕಿನಲ್ಲಿದ್ದ ಕೆದೆಮ್ ನಾಡಿಗೆ, ಕಳಿಸಿಬಿಟ್ಟನು.
- Verse 7: ಅಬ್ರಹಾಮನು ನೂರೆಪ್ಪತ್ತೈದು ವರ್ಷ ಬದುಕಿದ್ದನು.
- Verse 8: ಪೂರ್ಣ ಆಯುಷ್ಯವನ್ನು ಕಳೆದು, ಹಣ್ಣು ಹಣ್ಣು ಮುದುಕನಾಗಿ ಪ್ರಾಣಬಿಟ್ಟು ಅವನು ತನ್ನ ಪಿತೃಗಳ ಬಳಿಗೆ ಸೇರಿದನು.
- Verse 9: ಅವನ ಮಕ್ಕಳಾದ ಇಸಾಕ್ - ಇಷ್ಮಾಯೇಲರು ಅವನನ್ನು ಹಿತ್ತಿಯನಾದ ಚೋಹರನ ಮಗ ಎಫ್ರೋನನ ಹೊಲದಲ್ಲಿದ್ದ ಮಕ್ಪೇಲದ ಗವಿಯಲ್ಲಿ ಸಮಾಧಿಮಾಡಿದರು. ಅದು ಮಮ್ರೆಗೆ ಪೂರ್ವದಿಕ್ಕಿನಲ್ಲಿದೆ.
- Verse 10: ಅಬ್ರಹಾಮನೇ ಹಿತ್ತಿಯರಿಂದ ಕೊಂಡುಕೊಂಡ ಹೊಲ ಅದು. ಅದರಲ್ಲೇ ಅವನಿಗೂ ಅವನ ಹೆಂಡತಿ ಸಾರಳಿಗೂ ಸಮಾಧಿ ಆಯಿತು.
- Verse 11: ಅಬ್ರಹಾಮನು ಕಾಲವಾದ ಬಳಿಕ ಅವನ ಮಗ ಇಸಾಕನನ್ನು ದೇವರು ಆಶೀರ್ವದಿಸಿದರು. ಇಸಾಕನು ‘ಲಹೈರೋಯಿ’ ಎಂಬ ಬಾವಿಯ ಹತ್ತಿರ ವಾಸವಾಗಿದ್ದನು.
- Verse 12: ಅಬ್ರಹಾಮನಿಗೆ ಸಾರಳ ದಾಸಿಯೂ ಈಜಿಪ್ಟಿನವಳೂ ಆದ ಹಾಗರಳಲ್ಲಿ ಹುಟ್ಟಿದ ಇಷ್ಮಾಯೇಲನ ವಂಶಾವಳಿ:
- Verse 13: ಇಷ್ಮಾಯೇಲನ ಮಕ್ಕಳಿಗೂ ಅವರಿಂದ ಹುಟ್ಟಿದ ಕುಲಗಳಿಗೂ ಇಡಲಾಗಿದ್ದ ಹೆಸರುಗಳು ಇವು - ಮೊದಲು ಹುಟ್ಟಿದವನು ನೆಬಾಯೋತ್, ಆಮೇಲೆ ಹುಟ್ಟಿದವರು ಕೇದಾರ್, ಅದ್ಬಯೇಲ್,
- Verse 14: ಮಿಬ್ಸಾಮ್, ಮಿಷ್ಮಾ, ದೂಮಾ, ಮಸ್ಸಾ,
- Verse 15: ಹದದ್, ತೇಮಾ, ಯಟೂರ್, ನಾಫೀಷ್ ಹಾಗೂ ಕೇದ್ಮಾ.
- Verse 16: ಇವರೇ ಆ ಹನ್ನೆರಡು ಕುಲದ ಮೂಲಪುರುಷರು. ಈ ಹೆಸರುಗಳನ್ನು ಅವರು ವಾಸಿಸಿದ್ದ ಊರುಗಳಿಗೂ ಪಾಳೆಯಗಳಿಗೂ ಇಡಲಾಗಿತ್ತು.
- Verse 17: ಇಷ್ಮಾಯೇಲನು ನೂರಮೂವತ್ತೇಳು ವರ್ಷ ಬದುಕಿದ್ದನು. ಅನಂತರ ಸತ್ತು ತನ್ನ ಪಿತೃಗಳ ಬಳಿಗೆ ಸೇರಿದನು.
- Verse 18: ಇಷ್ಮಾಯೇಲ್ಯರು ಹವೀಲ ಹಾಗು ಶೂರಿನ ಮಧ್ಯೆಯಿರುವ ಪ್ರದೇಶದಲ್ಲಿ ವಾಸಮಾಡಿದರು. ಶೂರ್ ಈಜಿಪ್ಟಿನ ಪೂರ್ವಕ್ಕೆ ಅಸ್ಸೀರಿಯಗೆ ಹೋಗುವ ಹಾದಿಯಲ್ಲಿದೆ. ಹೀಗೆ ಇಷ್ಮಾಯೇಲ್ಯರು ತಮ್ಮ ಸಂಬಂಧಿಕರಿಗೆ ಎದುರುಬದುರಿನಲ್ಲೇ ವಾಸಮಾಡಿದರು.
- Verse 19: ಅಬ್ರಹಾಮನ ಮಗ ಇಸಾಕನ ವಂಶಾವಳಿ: ಅಬ್ರಹಾಮನು ಇಸಾಕನನ್ನು ಪಡೆದನು.
- Verse 20: ಇಸಾಕನು ನಲವತ್ತು ವರ್ಷದವನಾಗಿದ್ದಾಗ ಅರಾಮ್ಯರಾದ ಬೆತುವೇಲನ ಮಗಳೂ ಲಾಬಾನನ ತಂಗಿಯೂ ಆಗಿದ್ದ ರೆಬೆಕ್ಕಳನ್ನು ಮೆಸಪೊಟೇಮಿಯಾದಿಂದ ಬರಮಾಡಿಸಿಕೊಂಡು ಮದುವೆಯಾದನು.
- Verse 21: ರೆಬೆಕ್ಕಳಿಗೆ ಮಕ್ಕಳಾಗಲಿಲ್ಲ. ಸರ್ವೇಶ್ವರ ಅವನ ವಿಜ್ಞಾಪನೆಯನ್ನು ಆಲಿಸಿದರು. ರೆಬೆಕ್ಕಳು ಗರ್ಭವತಿಯಾದಳು.
- Verse 22: ಆಕೆಯ ಗರ್ಭದಲ್ಲಿದ್ದ ಅವಳಿ ಮಕ್ಕಳು ಒಂದನ್ನೊಂದು ಒತ್ತರಿಸಿದಾಗ ಆಕೆ, “ನನಗೇತಕ್ಕೆ ಹೀಗಾಗುತ್ತಿದೆ?” ಎಂದುಕೊಂಡು ಸರ್ವೇಶ್ವರ ಸ್ವಾಮಿಯನ್ನು ವಿಚಾರಿಸಲು ಹೋದಳು.
- Verse 23: ಸರ್ವೇಶ್ವರ ಆಕೆಗೆ ಇಂತೆಂದರು: ನಿನ್ನ ಉದರದೊಳಿವೆ ಜನಾಂಗಗಳೆರಡು ಹುಟ್ಟಿನಿಂದ ವೈರಿಗಳಾ ರಾಷ್ಟ್ರಗಳೆರಡು ಬಲಿಷ್ಠವಿರುವುದು ಒಂದು ಮತ್ತೊಂದಕೆ ಜ್ಯೇಷ್ಠನೇ ದಾಸನಾಗುವನು ಕನಿಷ್ಠನಿಗೆ.
- Verse 24: ದಿನ ತುಂಬಿದಾಗ ರೆಬೆಕ್ಕಳು ಅವಳಿ ಮಕ್ಕಳನ್ನು ಹೆತ್ತಳು.
- Verse 25: ಮೊದಲು ಹುಟ್ಟಿದ ಮಗು ಕೆಂಚಗೂ ಮೈಯೆಲ್ಲ ರೋಮಮಯವಾಗೂ ಇತ್ತು. ಎಂತಲೇ ಅದಕ್ಕೆ ಏಸಾವ ಎಂದು ಹೆಸರಿಟ್ಟರು.
- Verse 26: ಎರಡನೆಯ ಮಗು ಏಸಾವನ ಹಿಮ್ಮಡಿಯನ್ನು ಹಿಡಿದುಕೊಂಡು ಹುಟ್ಟಿದ್ದರಿಂದ ಅದಕ್ಕೆ ಯಕೋಬ ಎಂದು ಹೆಸರಿಟ್ಟರು. ಇವರು ಹುಟ್ಟಿದಾಗ ಇಸಾಕನಿಗೆ ಅರವತ್ತು ವರ್ಷವಾಗಿತ್ತು.
- Verse 27: ಆ ಹುಡುಗರಿಬ್ಬರು ಬೆಳೆದರು. ಏಸಾವನು ಚೂಟಿಯಾದ ಬೇಟೆಗಾರನಾದ, ವನವಾಸಿಯಾದ, ಯಕೋಬನು ಸಾಧುಮನುಷ್ಯ, ಅವನದು ಗುಡಾರಗಳಲ್ಲಿ ವಾಸ,
- Verse 28: ಇಸಾಕನಿಗೆ ಬೇಟೆಯ ಮಾಂಸ ಇಷ್ಟ; ಎಂದೇ ಏಸಾವನ ಮೇಲೆ ಹೆಚ್ಚು ಪ್ರೀತಿ. ರೆಬೆಕ್ಕಳಿಗಾದರೋ ಯಕೋಬನ ಮೇಲೆ ಹೆಚ್ಚು ಪ್ರೀತಿ.
- Verse 29: ಒಮ್ಮೆ ಯಕೋಬನು ಅಡಿಗೆ ಮಾಡುತ್ತಿದ್ದ. ಏಸಾವನು ಕಾಡಿನಿಂದ ದಣಿದು ಬಂದು,
- Verse 30: ‘ನಾನು ಬಹಳವಾಗಿ ದಣಿದು ಬಂದಿದ್ದೇನೆ. ಆ ಕೆಂಪು ಪದಾರ್ಥವನ್ನು ತಿನ್ನಲು ಕೊಡು’, ಎಂದು ಕೇಳಿದ. (ಈ ಕಾರಣದಿಂದಲೇ ಏಸಾವನಿಗೆ ಎದೋಮ್ ಎಂದು ಹೆಸರಾಯಿತು.)
- Verse 31: ಅದಕ್ಕೆ ಯಕೋಬ, ‘ನಿನ್ನದಾಗಿರುವ ಜ್ಯೇಷ್ಠಪುತ್ರನ ಹಕ್ಕನ್ನು ನನಗೆ ಮೊದಲು ಮಾರಿಬಿಡು,’ ಎಂದು ಹೇಳಿದ.
- Verse 32: ಏಸಾವನು, ‘ಆಗಲಿ, ಮಾರುತ್ತೇನೆ, ಸಾಯುತ್ತಿರುವ ನನಗೆ ಜ್ಯೇಷ್ಠತನದಿಂದ ಪ್ರಯೋನಜವೇನು? ಎಂದ.
- Verse 33: ಯಕೋಬನು ‘ಮಾರಿರುವುದಾಗಿ ನನಗೆ ಪ್ರಮಾಣ ಮಾಡು’, ಎಂದಾಗ ಏಸಾವನು ಪ್ರಮಾಣಮಾಡಿ ತನ್ನ ಜ್ಯೇಷ್ಠತನದ ಹಕ್ಕನ್ನು ಮಾರಿಬಿಟ್ಟ.
- Verse 34: ಆಗ ಯಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿ ಗುಗ್ಗರಿಯನ್ನೂ ಕೊಟ್ಟ. ಏಸಾವನು ತಿಂದು, ಕುಡಿದು, ಎದ್ದು ಹೋದ. ಜ್ಯೇಷ್ಠತನದ ಹಕ್ಕುಬಾಧ್ಯತೆಗೆ ಏಸಾವನು ಕೊಟ್ಟ ಮರ್ಯಾದೆ ಇಷ್ಟೇ!